🔥 TRENDING સાબરકાંઠા જિલ્લામાં હિંમતનગરમાં સંવિધા... नागभीड रस्त्यावर हरणांचा मुक्त संचार:... कुरावली के खिरिया पीपर गांव में जहर से... पुणे जिल्हा परिषद: २०२६-२७ आर्थिक वर्ष... ಗ್ರಾಹಕರ ಹಕ್ಕುಗಳ ವೇದಿಕೆಯಿಂದ ತಹಶಿಲ್ದಾರರಿ... காட்பாடி அருகே மாற்றுத்திறனாளி இளைஞர்...
24 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದ: ಹೋಟೆಲ್‌ಗಳಲ್ಲಿ ಬೆಲೆ ಏರಿಕೆ, ಅಸ್ವಚ್ಛತೆ ಹಾಗೂ ಕಾರ್ಮಿಕರ ಶೋಷಣೆ: ತಕ್ಷಣ ಸಭೆ ಕರೆದು ಕ್ರಮಕ್ಕೆ 'ಗ್ರಾಹಕರ ಹಕ್ಕುಗಳ ವೇದಿಕೆ' ಆಗ್ರಹ

✍️ Reporter: Ningappa 🗓 24 Nov 2026, 02:03 PM 👁 17
Share: 💬 WhatsApp 📘 Facebook 𝕏 Post
ದೇವದುರ್ಗ, ನ. 24:ಪಟ್ಟಣದ ಉಡುಪಿ ಸೇರಿದಂತೆ ವಿವಿಧ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸು ಹಾಗೂ ಚಹಾದ ಬೆಲೆಯನ್ನು ಏಕಾಏಕಿ ಮನಸೋಇಚ್ಛೆ ಹೆಚ್ಚಿಸಿ ಗ್ರಾಹಕರಿಂದ ಹಗಲು ದರೋಡೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ದೇವದುರ್ಗದ 'ಗ್ರಾಹಕರ ಹಕ್ಕುಗಳ ವೇದಿಕೆ' ವತಿಯಿಂದ ಇಂದು (ನ. 24) ತಹಶೀಲ್ದಾರ್ ಕಾರ್ಯಾಲಯ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದೀಪಾವಳಿ ಹಬ್ಬದ ನಂತರ ಪಟ್ಟಣದ ರಾಯಚೂರು ರೋಡ್, ಶಹಾಪುರ ರೋಡ್, ಜಾಲಹಳ್ಳಿ ರೋಡ್ ಸೇರಿದಂತೆ ಮುಖ್ಯ ರಸ್ತೆಗಳಲ್ಲಿರುವ ಕೆಲವು ಹೋಟೆಲ್‌ಗಳಲ್ಲಿ ಕೇವಲ 10 ರೂಪಾಯಿ ಇದ್ದ ಟೀ ಬೆಲೆಯನ್ನು 15 ರಿಂದ 20 ರೂಪಾಯಿಗೆ ಏರಿಸಲಾಗಿದೆ. ಹೋಟೆಲ್‌ಗಳಲ್ಲಿ ಸ್ವಚ್ಛತೆಯ ತೀವ್ರ ಕೊರತೆಯಿದ್ದು, ಗ್ರಾಹಕರಿಗೆ ಕಾಣುವಂತೆ ದರಪಟ್ಟಿ (ಬೆಲೆಗಳ ನಾಮಫಲಕ) ಅಳವಡಿಸಿಲ್ಲ ಎಂದು ವೇದಿಕೆಯ ಪದಾಧಿಕಾರಿಗಳು ದೂರಿದರು.

ಅಲ್ಲದೆ, ಹೋಟೆಲ್‌ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರದ 01-04-2026ರ ಆದೇಶದನ್ವಯ ಕನಿಷ್ಠ ವೇತನ, ಗ್ರಾಚ್ಯುಟಿ ಹಾಗೂ ಆರೋಗ್ಯ ಭತ್ಯೆಯಂತಹ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದ್ದರೂ ಕಾರ್ಮಿಕ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಮನವಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.

*ಸಭೆ ಕರೆದು ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ:*

ಸಾರ್ವಜನಿಕರ ಹಿತದೃಷ್ಟಿಯಿಂದ ತಹಶೀಲ್ದಾರರು ತಕ್ಷಣವೇ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳ ತುರ್ತು ಸಭೆ ಕರೆದು, ಅನಧಿಕೃತ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಎಲ್ಲಾ ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಲು, ಕಡ್ಡಾಯವಾಗಿ ದರಪಟ್ಟಿ ಅಳವಡಿಸಲು ಮತ್ತು ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ವೇದಿಕೆಯ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳ ವೇದಿಕೆಯ ಪ್ರಧಾನ ಸಂಚಾಲಕರಾದ ಎಚ್. ಶಿವರಾಜ್, ಸಹ-ಸಂಚಾಲಕರಾದ ಜಿ. ಬಸವರಾಜ ನಾಯಕ್, ಶಿವಪ್ಪ ಬಲ್ಲಿದವ, ಕರ್ನಾಟಕ ನೈಜ ಅಲೆಮಾರಿ ಸಮುದಾಯಗಳ ಸಂಘದ ರಾಜ್ಯಾಧ್ಯಕ್ಷರಾದ ಶಿವರಾಜ್ ರುದ್ರಾಕ್ಷಿ, ಹಮಾಲರ ಸಂಘದ ಅಧ್ಯಕ್ಷರಾದ ಎಂ.ಡಿ. ಯೂಸುಫ್ ಸಾಬ್, ಶಿವರಾಜ್ ಪೂಜಾರಿ, ಟಿ. ನಾಗರಾಜ, ವೀರೇಶ್ ರಾಮದುರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📲Get App