🔥 TRENDING ಜೂನಿಯರ್ ಎನ್‌ಟಿಆರ್ ಮತ್ತು ಅನಿಲ್ ರವಿಪುಡಿ... ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ... Karnataka CM D.K. Shivakumar recalls P... Karnataka CM Proposes Adding Woman to... RRB NTPC 2026 Recruitment Applications... Rajasthan Railway Blast Linked to Paki...
15 Nov 2026•
ગુજરાતી मराठी ਪੰਜਾਬੀ বাংলা

ಕಾಲುವೆಗಳಿಗೆ ನೀರು ಹರಿಸದಿದ್ದರೆ ಮೂರು ಜಿಲ್ಲೆಗಳ ಬಂದ್: ಮುಜಾಹಿದ್ ಮರ್ಚೆಡ್ ಎಚ್ಚರಿಕೆ

✍️ Reporter: Khaja Hussain 🗓 15 Nov 2026, 05:46 PM 👁 17
Share: 💬 WhatsApp 📘 Facebook 𝕏 Post
**ರಾಯಚೂರು ಬ್ರೇಕಿಂಗ್ ನ್ಯೂಸ್**

# ಕಾಲುವೆಗಳಿಗೆ ನೀರು ಹರಿಸದಿದ್ದರೆ ಮೂರು ಜಿಲ್ಲೆಗಳ ಬಂದ್: ಮುಜಾಹಿದ್ ಮರ್ಚೆಡ್ ಎಚ್ಚರಿಕೆ

### ನ.15ರೊಳಗೆ ನೀರು ಹರಿಸಲು ರೈತ ಸಂಘದ ಗಡುವು; ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಬಂದ್‌ಗೆ ಕರೆ ನೀಡುವ ಎಚ್ಚರಿಕೆ

**ಶಹಾಪುರ, ನ.15:** ಕೃಷ್ಣಾ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳ ಮೂಲಕ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ರೈತರ ಬೆಳೆಗಳಿಗೆ ಡಿಸೆಂಬರ್‌ವರೆಗೆ ಹಂತ ಹಂತವಾಗಿ ಸಮರ್ಪಕವಾಗಿ ನೀರು ಹರಿಸಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ.) ವತಿಯಿಂದ ಶಹಾಪುರದ ಬಿ.ಗುಡಿಯಲ್ಲಿರುವ ಕೃಷ್ಣ ಭಾಗ್ಯ ಜಲ ನಿಗಮದ ಕಚೇರಿ ಎದುರು ನ.11ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ.

ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಸಂಘಟನೆಯ ರಾಯಚೂರು ಜಿಲ್ಲಾ ಕಾರ್ಯಾಧ್ಯಕ್ಷ ಮುಜಾಹಿದ್ ಮರ್ಚೆಡ್, ನೀರಿನ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ನಿರ್ಧಾರಗಳಿಂದ ಈ ಭಾಗದ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಲಾಶಯದಲ್ಲಿನ ನೀರಿನ ಲಭ್ಯತೆ ಹಾಗೂ ವಾಸ್ತವ ಪರಿಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸದೆ ಐಸಿಸಿ ಸಭೆಗಳಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವುದು ಖಂಡನೀಯ. ರಾಜ್ಯದ ರೈತರು ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸದಿರುವುದು ದುರದೃಷ್ಟಕರ. ಸಕಾಲದಲ್ಲಿ ನೀರು ದೊರೆಯದಿದ್ದರೆ ರೈತರ ವರ್ಷಪೂರ್ತಿ ಶ್ರಮ ವ್ಯರ್ಥವಾಗುವುದಲ್ಲದೆ, ಜಾನುವಾರುಗಳಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು. ನಮ್ಮ ಸಂಘಟನೆಯು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನ.15, 2026ರವರೆಗೆ ಗಡುವು ನೀಡಿದೆ. ಅಷ್ಟರೊಳಗೆ ಕೃಷ್ಣಾ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಬೃಹತ್ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸುವುದರ ಜೊತೆಗೆ ಮೂರು ಜಿಲ್ಲೆಗಳ ಬಂದ್‌ಗೆ ಕರೆ ನೀಡಲಾಗುವುದು ಎಂದು ಮುಜಾಹಿದ್ ಮರ್ಚೆಡ್ ಎಚ್ಚರಿಕೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಜಲಾಶಯದಲ್ಲಿನ ಪ್ರಸ್ತುತ ನೀರಿನ ಪ್ರಮಾಣ, ಕುಡಿಯುವ ನೀರಿನ ಅಗತ್ಯ ಹಾಗೂ ಇತರ ಬಳಕೆಗಳ ಕುರಿತು ನಿಖರ ಮಾಹಿತಿ ಪಡೆದು ವೈಜ್ಞಾನಿಕವಾಗಿ ನೀರು ಹಂಚಿಕೆ ಮಾಡಬೇಕು. ಕೈಗಾರಿಕಾ ಹಾಗೂ ಇತರ ಬಳಕೆಗಳಿಗೆ ಮೀಸಲಿಟ್ಟಿರುವ ನೀರಿನ ಹಂಚಿಕೆಯನ್ನು ಮರುಪರಿಶೀಲಿಸಿ, ಸಂಕಷ್ಟದಲ್ಲಿರುವ ರೈತರ ಬೆಳೆಗಳಿಗೆ ಮೊದಲ ಆದ್ಯತೆ ನೀಡಬೇಕು. ಡಿಸೆಂಬರ್‌ವರೆಗೆ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಹಂತ ಹಂತವಾಗಿ ಕಾಲುವೆಗಳಿಗೆ ಹರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರ ಬೆವರು ಮತ್ತು ಶ್ರಮದಿಂದ ದೇಶಕ್ಕೆ ಅನ್ನ ದೊರೆಯುತ್ತಿದೆ. ಅನ್ನದಾತರ ಬೆಳೆಗಳನ್ನು ಉಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ರೈತರ ಬದುಕು ಮತ್ತು ಕೃಷಿಯನ್ನು ನಿರ್ಲಕ್ಷಿಸಿ ಕೈಗಾರಿಕೆಗಳಿಗೆ ಮಾತ್ರ ಆದ್ಯತೆ ನೀಡುವ ನೀತಿಯನ್ನು ಅನುಸರಿಸಬಾರದು. ರೈತರ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ, ರಾಯಚೂರು ಜಿಲ್ಲಾಧ್ಯಕ್ಷ ಇಂದ್ರಜೀತ್ ಯಾದವ್, ಅಬ್ದುಲ್ ಬಾಷಾ, ಮಹೇಶ್ ಹೊಸಪೇಟೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ರೈತರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App