🔥 TRENDING Khaas report mr Nazir Ahmad Sofi Khaas report mr Nazir Ahmad Sofi kashm... गुजरा-पूजा गांव के चकमार्ग की दशा बिगड... ਪ੍ਰੋ : ਹਰਪ੍ਰੀਤ ਸਿੰਘ ਕੋਟ ਹਲਕਾ ਖਡੂਰ ਸਾਹਿ... Khaas report mr Nazir Ahmad Sofi kashm... छठ महापर्व को लेकर मधेपुर में लगा भीषण...
14 Nov 2026•
ગુજરાતી मराठी ਪੰਜਾਬੀ বাংলা
Religion

ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾಮಠ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಭು ಬಿ. ಚವ್ಹಾಣ ಆಯ್ಕೆ

✍️ Reporter: Basavaraj pujari 🗓 14 Nov 2026, 12:45 PM 👁 19
Share: 💬 WhatsApp 📘 Facebook 𝕏 Post

*ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾಮಠ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಭು ಬಿ. ಚವ್ಹಾಣ ಆಯ್ಕೆ* -- ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಭಾಯಾಗಡ್, ಸುರಗೊಂಡನಕೊಪ್ಪದಲ್ಲಿರುವ ಬಂಜಾರ ಸಮುದಾಯದ ಆರಾಧ್ಯ ದೈವ,

ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾಮಠ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಭು ಬಿ. ಚವ್ಹಾಣ ಆಯ್ಕೆ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಭಾಯಾಗಡ್, ಸುರಗೊಂಡನಕೊಪ್ಪದಲ್ಲಿರುವ ಬಂಜಾರ ಸಮುದಾಯದ ಆರಾಧ್ಯ ದೈವ, ಧರ್ಮಗುರು ಶ್ರೀ ಸಂತ ಸೇವಾಲಾಲ್ ಮಹಾರಾಜರ ಪವಿತ್ರ ಜನ್ಮಸ್ಥಾನ ಮಹಾಮಠ ಸಮಿತಿಯ ನೂತನ ಅಧ್ಯಕ್ಷರಾಗಿ ಬೀದರ ಜಿಲ್ಲೆಯ ಔರಾದ(ಬಿ) ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್ 13ರಂದು ಮಹಾಮಠದ ಸಭಾಂಗಣದಲ್ಲಿ ಹಾವೇರಿ ಅಪರ ಜಿಲ್ಲಾಧಿಕಾರಿ ನಾಗರಾಜ ನಾಯಕ್ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಪ್ರಭು ಬಿ. ಚವ್ಹಾಣ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು. ಸಮಿತಿಯ ಇತರ ಎಲ್ಲ ಪದಾಧಿಕಾರಿಗಳ ಆಯ್ಕೆಯೂ ಅವಿರೋಧವಾಗಿ ನಡೆಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಪ್ರಭು ಬಿ. ಚವ್ಹಾಣ ಅವರು, ಬಂಜಾರ ಸಮುದಾಯದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾಗಿರುವ ಸಂತ ಸೇವಾಲಾಲ್ ಮಹಾರಾಜರು ಜನ್ಮತಾಳಿದ ಈ ಪುಣ್ಯಭೂಮಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಬೇಕು. ದೇಶದ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಬೇಕು ಎಂಬುದು ನನ್ನ ಮಹದಾಸೆಯಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಮಹಾಮಠವನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವುದು ನನ್ನ ಪ್ರಮುಖ ಸಂಕಲ್ಪವಾಗಿದೆ. ಮಠದ ಪೂಜೆ, ದಾಸೋಹ ಸೇರಿದಂತೆ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುವಂತೆ ಸುಸ್ಥಿರ ಆರ್ಥಿಕ ವ್ಯವಸ್ಥೆ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಮಹಾಮಠದ ಅಭಿವೃದ್ಧಿಯ ಜೊತೆಗೆ ಸಂತ ಸೇವಾಲಾಲ್ ಮಹಾರಾಜರು ಸಾರಿದ ಸತ್ಯ, ಸಮಾನತೆ, ಮಾನವೀಯತೆ, ಸೇವೆ ಹಾಗೂ ಸಮಾಜ ಸುಧಾರಣೆಯ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರ ಜೀವನಚರಿತ್ರೆ, ಬೋಧನೆಗಳು ಹಾಗೂ ಬಂಜಾರ ಸಮುದಾಯದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ದೇಶದಾದ್ಯಂತ ಪರಿಚಯಿಸುವ ಉದ್ದೇಶದಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಬಂಜಾರ ಸಮುದಾಯದ ಸರ್ವತೋಮುಖ ಏಳಿಗೆ, ಯುವಜನರ ಪ್ರಗತಿ, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಮೌಲ್ಯಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗುವುದು. ಮಹಾಮಠವನ್ನು ಭಕ್ತರ ಶ್ರದ್ಧಾಕೇಂದ್ರವನ್ನಾಗಿ ಮಾತ್ರವಲ್ಲದೆ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಸಚಿವರಾದ ರುದ್ರಪ್ಪ ಲಮಾಣಿ ಅವರು ಸುಮಾರು ವರ್ಷಗಳ ಕಾಲ ಮಹಾಮಠ ಸಮಿತಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಹೇಳಿದರು.

*ನೂತನ ಪದಾಧಿಕಾರಿಗಳು:* ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೋಜಾನಾಯಕ್, ಖಜಾಂಚಿಯಾಗಿ ಶಿವಮೊಗ್ಗ ಜಿಲ್ಲೆಯ ಹನುಮ ನಾಯಕ್, ಉಪಾಧ್ಯಕ್ಷರಾಗಿ ದಾವಣಗೆರೆ ಜಿಲ್ಲೆಯ ಭೋಪಾಲನಾಯಕ್, ಚಿತ್ರದುರ್ಗ ಜಿಲ್ಲೆಯ ಅನೀಲಕುಮಾರ, ಬಳ್ಳಾರಿ ಜಿಲ್ಲೆಯ ಲಕ್ಷ್ಮಣ ನಾಯಕ್, ಜಂಟಿ ಕಾರ್ಯದರ್ಶಿಗಳಾಗಿ ಕಲಬುರಗಿ ಜಿಲ್ಲೆಯ ಅಮರನಾಥ ಪಾಂಡು ಚವ್ಹಾಣ, ಶಿವಮೊಗ್ಗ ಜಿಲ್ಲೆಯ ಪುಷ್ಪಾಬಾಯಿ, ಕೊಪ್ಪಳದ ಲಕ್ಣ್ಮಣ ನಾಯಕ ಅವರು ಆಯ್ಕೆಯಾಗಿದ್ದಾರೆ.
📲Get App