🔥 TRENDING Maharashtra SSC 2026 Top Ten Scorers R... Uttar Pradesh CM Yogi Adityanath ridic... Vice President joins Ayodhya Deepotsav... Kanpur Metro's New Steel Arch Bridge S... President Droupadi Murmu to Honor Indo... दीपावली के पावन अवसर पर गुना के फूल मं...
08 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗ | ವಸತಿ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ

✍️ Reporter: Ningappa 🗓 08 Nov 2026, 01:05 PM 👁 13
Share: 💬 WhatsApp 📘 Facebook 𝕏 Post
ವಸತಿ, ನಿವೇಶನ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ


ದೇವದುರ್ಗ: ತಾಲೂಕಿನ ಬಡತನ ರೇಖೆಗಿಂತ ಕೆಳಗಿರುವ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಸ್ಥರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಸತಿ ಮತ್ತು ನಿವೇಶನ ಒದಗಿಸುವುದು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ) ತಾಲೂಕು ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ನ. 7ರಂದು ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿ ಮುಖಂಡರು, 2026ರ ಜೂನ್ 4ರಂದು ದೇವದುರ್ಗ ತಾಲೂಕಿನ ಗಾಂಧಿ ವೃತ್ತದ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಸಲ್ಲಿಸಿದ್ದ ಮನವಿಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ತಾಲೂಕಿನ ಅನೇಕ ಬಡ ಕುಟುಂಬಗಳು ಒಂದೇ ಮನೆಯಲ್ಲಿ ಎರಡು-ಮೂರು ಕುಟುಂಬಗಳಾಗಿ ತಂದೆ-ತಾಯಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿವೆ. ಆರ್ಥಿಕ ಸಂಕಷ್ಟದಿಂದ ಖಾಸಗಿ ನಿವೇಶನ ಖರೀದಿಸಿ ಪ್ರತ್ಯೇಕ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಿವೇಶನ ಮತ್ತು ವಸತಿ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಭೂಮಿ ಗುರುತಿಸಬೇಕು ಅಥವಾ ಖಾಸಗಿ ಭೂಮಿ ಖರೀದಿಸಿ ವಸತಿ ಬಡಾವಣೆ ನಿರ್ಮಿಸಿ ಅರ್ಹರಿಗೆ ನಿವೇಶನ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ 2025ರ ಡಿಸೆಂಬರ್ 23ರಂದು ದೇವದುರ್ಗ ಮಿನಿ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಮನವಿ ಸ್ವೀಕರಿಸಿ, ಮೂರು ತಿಂಗಳೊಳಗೆ ಬೇಡಿಕೆಗಳನ್ನು ಈಡೇರಿಸಿ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆಯ ಮೇರೆಗೆ ಧರಣಿ ಹಿಂಪಡೆಯಲಾಗಿತ್ತು. ಆದರೆ ಐದಾರು ತಿಂಗಳು ಕಳೆದರೂ ಯಾವುದೇ ಬೇಡಿಕೆ ಈಡೇರಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಮಿತಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ಪ್ರಮುಖ ಬೇಡಿಕೆಗಳು:

1. ಅರಕೇರಾ ತಾಲೂಕಿನ ಸರ್ವೆ ನಂಬರ್ 39ರಲ್ಲಿ ಬಾರ್ ಡ್ಯಾಶ್‌ಬೋರ್ಡ್ ಅಡಿಯಲ್ಲಿ ಗುರುತಿಸಲಾದ 83 ಎಕರೆ 30 ಗುಂಟೆ ಭೂಮಿಯಲ್ಲಿ 25 ಎಕರೆ ಭೂಮಿಗೆ ಈಗಾಗಲೇ ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಭೂಮಿ ಗುರುತಿಸಿ ನಿವೇಶನ ಬಡಾವಣೆ ನಿರ್ಮಿಸಬೇಕು.

2. ಸುವರ್ಣ ಗ್ರಾಮ ಯೋಜನೆಯಡಿ ಗುರುತಿಸಲಾದ ಲಿಂಗದಹಳ್ಳಿ, ಶಾವಂತಗೇರಾ ಹಾಗೂ ತಿಪ್ಪಲದಿನ್ನಿ ಗ್ರಾಮಗಳಲ್ಲಿ ಗ್ರಾಮಸಭೆ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು.

3. ಅರಕೇರಾ ಗ್ರಾಮದ ಇಲುಕುಂಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು. ಜೆಡಿಎಸ್ ಯೋಜನೆಯಡಿ ಕೈಗೊಂಡ ಕಾಮಗಾರಿ ಅಪೂರ್ಣವಾಗಿರುವ ಕುರಿತು ತನಿಖೆ ನಡೆಸಿ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮಕ್ಕೆ ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.

ಈ ಬೇಡಿಕೆಗಳನ್ನು ಶೀಘ್ರ ಈಡೇರಿಸಿ ಬಡ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶಿವಪ್ಪ ಪಲಕನಮರಡಿ, ತಾಲೂಕು ಸಂಚಾಲಕ ರಮೇಶ್ ಬಾವಿಮನಿ, ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಚೆನ್ನಮ್ಮ ಅರಕೇರಾ, ಚಿನ್ನಪ್ಪ ಮದರಕಲ್, ಶರಣಬಸವ ಮದರಕಲ್, ರೇಣುಕಾ, ಬಗ್ಗಮ್ಮ, ಶಾಂತಮ್ಮ ಸೇರಿದಂತೆ ನಿವೇಶನ ರಹಿತ ಫಲಾನುಭವಿಗಳು ಉಪಸ್ಥಿತರಿದ್ದರು.
📲Get App