🔥 ट्रेंडिंग 2=4 लुधियाना में नकली नोटों के साथ दो संदि... सुप्रीम कोर्ट ने दिवाली पर 'ग्रीन' पटा... बिहार बोर्ड ने 2027 की मैट्रिक‑इंटर वा... इंदौर: अभ्यास मंडल ने विद्यार्थियों के... मध्य प्रदेश सरकार की नई पहल: भारतीय इत...
02 नव. 2026•
ગુજરાતી मराठी ਪੰਜਾਬੀ বাংলা

###ರಾಯಚೂರು ಜಿಲ್ಲೆ ಯಲ್ಲಿ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ವಿಶೇಷ ಕಾನೂನು ರೂಪಿಸಿ

✍️ रिपोर्टर: Khaja Hussain 🗓 02 नव. 2026, 05:24 PM 👁 23
शेयर करें: 💬 WhatsApp 📘 Facebook 𝕏 Post
ದೇವದುರ್ಗ | ಬ್ರೇಕಿಂಗ್ ನ್ಯೂಸ್

###ರಾಯಚೂರು ಜಿಲ್ಲೆ ಯಲ್ಲಿ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ವಿಶೇಷ ಕಾನೂನು ರೂಪಿಸಿ

### ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿಯಿಂದ ಆಗ್ರಹ; ಮುಖ್ಯಮಂತ್ರಿ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಕೆ

ದೇವದುರ್ಗ, ನ. 2: ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ವಿಶೇಷ ಕಾನೂನು ರೂಪಿಸಬೇಕು ಹಾಗೂ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.), ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಮಿತಿ ಆಗ್ರಹಿಸಿದೆ.

ಈ ಕುರಿತು ಸಮಿತಿಯ ವತಿಯಿಂದ ಸೋಮವಾರ ದೇವದುರ್ಗ ತಾಲೂಕು ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರದಲ್ಲಿ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆದಿರುವ ಹಲವು ಘಟನೆಗಳನ್ನು ಉಲ್ಲೇಖಿಸಲಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ದಲಿತ ಯುವಕನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಭೀಮರಾಯ ಹದ್ದಿನಾಳ ಇದುವರೆಗೆ ಬಂಧನವಾಗಿಲ್ಲ ಎಂದು ಸಮಿತಿ ಆರೋಪಿಸಿದೆ.

ಸಿರವಾರ ತಾಲೂಕಿನ ಹೊಕ್ಕಾಣೆ ಗ್ರಾಮದಲ್ಲಿ 21 ವರ್ಷದ ಪದವೀಧರೆ ದಲಿತ ಯುವತಿ ಅಶ್ವಿನಿ ಅವರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಾವಿಗೆ ಎಸೆಯಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಲಿಂಗಸೂರು ತಾಲೂಕಿನ ಕರದಕಲ್ ಗ್ರಾಮದ ರಾಣಮ್ಮ ಅವರ ಮೇಲೆ ಆಗಸ್ಟ್ 19ರಂದು ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದೇ ರೀತಿ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ರಥೋತ್ಸವದ ಸಂದರ್ಭದಲ್ಲಿ ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಸಂತ್ರಸ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಮಿತಿ ತಿಳಿಸಿದೆ.

ಲಿಂಗಸೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ದಲಿತ ಗ್ರಾಹಕರಿಗೆ ಪ್ರತ್ಯೇಕ ಗ್ಲಾಸ್‌ಗಳಲ್ಲಿ ನೀರು ನೀಡದೆ, ದೂರದಿಂದಲೇ ಮೇಲಿನಿಂದ ನೀರು ಸುರಿಯುವ ಮೂಲಕ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಸಮಿತಿ ಮಾಡಿದೆ.

ಸಮಿತಿಯ ಪ್ರಮುಖ ಆಗ್ರಹಗಳು:

ರಾಯಚೂರು ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ, ಅತ್ಯಾಚಾರ, ಕೊಲೆ ಹಾಗೂ ಸಾಮಾಜಿಕ ಬಹಿಷ್ಕಾರದ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಸ್ಪೃಶ್ಯತೆ ಆಚರಣೆಗೆ ಅವಕಾಶ ನೀಡುವ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಅಲ್ಲದೆ, ಭೂಮಾನಂದ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಬೇಕು. ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಮನವಿ ಮಾಡಲಾಗಿದೆ.

ಭಾರತ ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆಚರಣೆಗಳು ಮುಂದುವರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಶಿವಪ್ಪ ಪಲಕನಮರಡಿ, ದೇವದುರ್ಗ ತಾಲೂಕು ಸಂಚಾಲಕ ರಮೇಶ್ ಭಾವಿಮನಿ, ಅರಕೇರಾ ತಾಲೂಕು ಸಂಚಾಲಕ ರಾಮಪ್ಪ ಮೇಸ್ತ್ರಿ, ತಾಲೂಕು ಸಂಘಟನಾ ಸಂಚಾಲಕರಾದ ಈಶಪ್ಪ ಶಿವಂಗಿ, ಡೇವಿಡ್ ಮಸರಕಲ್, ರಂಗಪ್ಪ ತೊಗರಿ, ಸಿದ್ದಪ್ಪ ಜನಕಲ್ ಪಾಲಕನಮರಡಿ, ರಮೇಶ್ ಭೋವಿ ಗೆಜ್ಜೆಬಾವಿ, ದುರುಗೇಶ್, ವಿರೇಶ್ ಬೆರಿ, ರಮೇಶ್ ಹಿರೇಬುದುರ್, ಅದಪ್ಪ ಮ್ಯಾ ಕಲದೊಡ್ಡಿ, ಸಿದ್ದಪ್ಪ ಬೂದಿನಾಳ್, ಸಂಗಮೇಶ ಲಿಂಗದಹಳ್ಳಿ, ಗಫೂರ್ ಗೌರಪೇಟೆ, ರಮೇಶ್ ಹೆದ್ದಾರಿ, ಮೌನೇಶ್ ಕಕ್ಕಲದೊಡ್ಡಿ, ಮೌನೇಶ್ ಗಾಂಧಿ, ರಾಜು ತವಗ ಸೇರಿದಂತೆ ನೂರಾರು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App