🔥 TRENDING Star Trek’ ਫੇਮ ਪੈਟ੍ਰਿਕ ਸਟੀਵਰਟ ਦਾ ਦੇਹਾਂ... Arunachal CM Labels Chinese Troop Move... दीपावली पर जयनगर के प्रधन पिक्चर हाउस... Holy Relics to Be Displayed in Arunach... New National Highway Linking Assam and... झारखंड शिक्षक पात्रता परीक्षा 2026 के...
30 Oct 2026•
ગુજરાતી मराठी ਪੰਜਾਬੀ বাংলা

ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆಯಲ್ಲಿ ಖಾಲಿ ಹುದ್ದೆ ಭರ್ತಿಗೆ AIMIM ಆಗ್ರಹ

✍️ Reporter: Khaja Hussain 🗓 30 Oct 2026, 12:21 PM 👁 28
Watch on: 📘 Facebook
Share: 💬 WhatsApp 📘 Facebook 𝕏 Post
**ರಾಯಚೂರು | ವಿಶೇಷ ವರದಿ**

# ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆಯಲ್ಲಿ ಖಾಲಿ ಹುದ್ದೆ ಭರ್ತಿಗೆ AIMIM ಆಗ್ರಹ

### ಜಿಲ್ಲೆಯಲ್ಲಿ 24 ಪಿಎಸ್‌ಐ, 127 ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿ; ಪಾಲಿಕೆಯಲ್ಲಿ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಹಾಗೂ ಖಾಯಂ ನೇಮಕಾತಿಗೆ ಒತ್ತಾಯ

**ರಾಯಚೂರು, ಅ. 30:** ರಾಯಚೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಉಪನಿರೀಕ್ಷಕರು (ಪಿಎಸ್‌ಐ) ಹಾಗೂ ಪೊಲೀಸ್ ಪೇದೆಗಳ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಅದೇ ರೀತಿ ರಾಯಚೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆ ನೀಗಿಸಿ, ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಡಿ ಆಗ್ರಹಿಸಿದ್ದಾರೆ.

ಈ ಕುರಿತು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಜಿಲ್ಲೆಯ ಜನಸಂಖ್ಯೆ ಹೆಚ್ಚಳ ಹಾಗೂ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ. ಪ್ರಸ್ತುತ ಜಿಲ್ಲೆಯಲ್ಲಿ 24 ಪಿಎಸ್‌ಐ ಹಾಗೂ 127 ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿ ಕೊರತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಮೇಲೆ ಹೆಚ್ಚಿನ ಕೆಲಸದ ಒತ್ತಡ ಉಂಟಾಗುತ್ತಿದ್ದು, ರಾತ್ರಿ ಗಸ್ತು, ಅಪರಾಧ ಪ್ರಕರಣಗಳ ತನಿಖೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

**ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ:**

ರಾಯಚೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಅಗತ್ಯವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆ ಇದೆ. ಗ್ರೇಡ್ ಎ ವಿಭಾಗದಲ್ಲಿ 11 ಅಧಿಕಾರಿಗಳ ಕೊರತೆಯಿದ್ದು, ಇಬ್ಬರು ಡೆಪ್ಯುಟೇಷನ್ ಹಾಗೂ ಒಬ್ಬರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರೇಡ್ ಬಿ ವಿಭಾಗದಲ್ಲಿ 10 ಅಧಿಕಾರಿಗಳ ಕೊರತೆಯಿದ್ದು, ಮೂವರು ಡೆಪ್ಯುಟೇಷನ್‌ನಲ್ಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಗ್ರೇಡ್ ಸಿ ವಿಭಾಗದಲ್ಲಿ 136 ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಐವರು ಡೆಪ್ಯುಟೇಷನ್‌ನಲ್ಲಿದ್ದಾರೆ ಹಾಗೂ ಎಂಟು ಹುದ್ದೆಗಳು ಖಾಲಿ ಇವೆ. ಗ್ರೇಡ್ ಡಿ ವಿಭಾಗದಲ್ಲಿ 383 ಸಿಬ್ಬಂದಿ ಮತ್ತು ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, 71 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.

ಒಟ್ಟಾರೆ 520 ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರು ಉದ್ಯೋಗದ ಅನಿಶ್ಚಿತತೆಯಲ್ಲಿ ಬದುಕುವಂತಾಗಬಾರದು. ಅವರ ಸೇವಾ ಭದ್ರತೆ, ಗೌರವಯುತ ಜೀವನ ಹಾಗೂ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗಬಾರದು. ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದೂ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಗೃಹ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಮಹಾನಗರ ಪಾಲಿಕೆಯ ಸಿಬ್ಬಂದಿ ಕೊರತೆ ನೀಗಿಸುವುದರ ಜೊತೆಗೆ ಹೊರಗುತ್ತಿಗೆ ನೌಕರರ ಸೇವೆಯನ್ನು ನಿಯಮಾನುಸಾರ ಖಾಯಂಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಶೈಬಾಜ್ ಖಾನ್, ನಗರ ಜಂಟಿ ಕಾರ್ಯದರ್ಶಿಗಳಾದ ತನ್ವೀರ್ ಅಹ್ಮದ್ ಖಾನ್ ಹಾಗೂ ಸಂತೋಷ್ ಸೂರ್ಯವಂಶಿ, ಕಾರ್ಯಕಾರಿ ಸದಸ್ಯ ಈರಣ್ಣೇಶ್ ಬೋವಿ, ಮಹಿಳಾ ಜಂಟಿ ಕಾರ್ಯದರ್ಶಿ ಪರ್ವೀನ್ ಸಲೀಂ ಶೇಕ್, ವಾರ್ಡ್ ನಂ. 28ರ ಕಾರ್ಯದರ್ಶಿ ರಹಮಾನ್ ಹಾಗೂ ವಾರ್ಡ್ ನಂ. 29ರ ಅಧ್ಯಕ್ಷ ಮೊಹಮ್ಮದ್ ಅಲಿಮ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App