🔥 TRENDING NCW Registers Harassment Complaint Aga... Prehistoric Stegodon Jaw Unearthed in... Cyclone Warning Issued for Kolkata as... Bihar CM Samrat Chaudhary Prays at Mun... Police kill suspect who shot Bengal co... અરવલ્લી જિલ્લાની BJP સંગઠનાત્મક બેઠકમા...
16 Nov 2026•
ગુજરાતી मराठी ਪੰਜਾਬੀ বাংলা

ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮೀಸಲಾತಿ ಹೋರಾಟದ ರೂಪುರೇಷೆ ಸಿದ್ಧ - ಪ್ರಸನ್ನಾನಂದ ಶ್ರೀಗಳ ಸಾನಿಧ್ಯದಲ್ಲಿ ರಾಜ್ಯಮಟ್ಟದ ಸಭೆ - ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ, 9ನೇ ಅನುಸೂಚಿಗೆ ಸೇರಿಸಲು ಕೇಂದ್ರಕ್ಕೆ ಒತ್ತಾಯಕ್ಕೆ ನಿರ್ಣಯ - ಬಂಡೋಳ್ಳಿಯಲ್ಲಿ 28ಕ್ಕೆ ಶಿಕ್ಷಣ ಸಂಸ್ಥೆಗೆ ಭೂಮಿ ಪೂಜೆ

✍️ Reporter: Ningappa 🗓 16 Nov 2026, 09:38 AM 👁 19
Share: 💬 WhatsApp 📘 Facebook 𝕏 Post

ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮೀಸಲಾತಿ ಬಗ್ಗೆ ರಾಜ್ಯಮಟ್ಟದ ಸಭೆ - ಪ್ರಸನ್ನಾನಂದ ಶ್ರೀಗಳ ಸಾನಿಧ್ಯದಲ್ಲಿ ಚರ್ಚೆ - ಮೀಸಲಾತಿ ಹೆಚ್ಚಳಕ್ಕೆ ಕಾನೂನುಬದ್ಧ ಮಾನ್ಯತೆ, ಹೈಕೋರ್ಟ್ ತಡೆಯಾಜ್ಞೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ, 9ನೇ ಅನುಸೂಚಿಗೆ ಸೇರಿಸುವ ಬೇಡಿಕೆ, ಬಂಡೋಳ್ಳಿಯಲ್ಲಿ ಶಿಕ್ಷಣ ಸಂಸ್ಥೆಗೆ 28ಕ್ಕೆ ಭೂಮಿ ಪೂಜೆ - ಮುಂದಿನ ಹೋರಾಟದ ರೂಪುರೇಷೆಗೆ ನಿರ್ಣಯ

ರಾಜನಹಳ್ಳಿ: ಇದೇ ನವೆಂಬರ್ 14 ರಂದು ಶನಿವಾರ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯಲ್ಲಿ ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ರಾಜ್ಯಮಟ್ಟದ ಸಭೆ ನಡೆಯಿತು.

ಈ ಸಭೆಯಲ್ಲಿ ಪ್ರಮುಖ 4 ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
1) ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕಾನೂನುಬದ್ಧ ಮಾನ್ಯತೆ.
2) ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ.
3) ಮೀಸಲಾತಿ ಹೆಚ್ಚಳವನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರದ ಮೂಲಕ ಕ್ರಮ ಕೈಗೊಳ್ಳುವ ಬೇಡಿಕೆ ಹಾಗೂ
4) ಸುರಪುರ ತಾಲೂಕು ಬಂಡೋಳ್ಳಿ ಗ್ರಾಮದಲ್ಲಿ ಶ್ರೀಮಠದ 17 ಎಕರೆ ಜಮೀನಿನಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಲು ಸರ್ಕಾರದಿಂದ 5 ಕೋಟಿ ಬಿಡುಗಡೆಯಾಗಿದ್ದು ಇದೇ ತಿಂಗಳು ದಿನಾಂಕ 28-11-2026 ಶನಿವಾರ ಭೂಮಿ ಪೂಜೆ ಕಾರ್ಯಕ್ರಮ.

ಹಿಂದಿನ ಮೀಸಲಾತಿ ಮತ್ತು ಹೆಚ್ಚಿಸಿದ ಮೀಸಲಾತಿ: ಪರಿಶಿಷ್ಟ ಜಾತಿ (SC) 15% ರಿಂದ 17%, ಪರಿಶಿಷ್ಟ ಪಂಗಡ (ST) 3% ರಿಂದ 7%, ಇತರೆ ಹಿಂದುಳಿದ ವರ್ಗಗಳು (OBC) 32% ರಿಂದ 32%, ಒಟ್ಟು 50% ರಿಂದ 56%. ಈ ಹೆಚ್ಚಳವನ್ನು ಕರ್ನಾಟಕ ಸರ್ಕಾರ 2022ರ ಕಾಯ್ದೆಯ ಮೂಲಕ ಜಾರಿಗೆ ತಂದಿತ್ತು.

ಹೈಕೋರ್ಟ್ ತೀರ್ಪು ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ: 2026ರ ಅಕ್ಟೋಬರ್ 12ರಂದು ಕರ್ನಾಟಕ ಹೈಕೋರ್ಟ್ 56% ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯ ಹೆಚ್ಚಳದ ಭಾಗವನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿತು.

ಹೈಕೋರ್ಟ್‌ನ ಪ್ರಮುಖ ಆಕ್ಷೇಪಣೆಗಳು: ಒಟ್ಟು ಮೀಸಲಾತಿ ಶೇ.50ರ ಮಿತಿಯನ್ನು ಮೀರಿರುವುದು. ಮಿತಿಯನ್ನು ಮೀರುವುದಕ್ಕೆ ಅಗತ್ಯವಾದ ಅಸಾಧಾರಣ ಸಾಂವಿಧಾನಿಕ ಕಾರಣಗಳನ್ನು ಸಮರ್ಪಕವಾಗಿ ಸಾಬೀತುಪಡಿಸದಿರುವುದು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ನವೆಂಬರ್ 2026ರಲ್ಲಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ (SLP) ಸಲ್ಲಿಸಿದೆ.

ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವ ಬೇಡಿಕೆ ಇದು ಅತ್ಯಂತ ಪ್ರಮುಖವಾದ ವಿಚಾರ. ಸಂವಿಧಾನದ ಒಂಬತ್ತನೇ ಅನುಸೂಚಿಗೆ ಕಾನೂನನ್ನು ಸೇರಿಸುವ ಮೂಲಕ ಕೆಲವು ಕಾನೂನುಗಳಿಗೆ ಸಂವಿಧಾನದ 31Bನೇ ವಿಧಿಯ ಅಡಿಯಲ್ಲಿ ನ್ಯಾಯಾಂಗ ಪರಿಶೀಲನೆಯಿಂದ ವಿಶೇಷ ರಕ್ಷಣೆ ದೊರೆಯುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಬೇಡಿಕೆ ಏನೆಂದರೆ: SC ಮೀಸಲಾತಿಯನ್ನು 17%ಕ್ಕೆ ಹೆಚ್ಚಿಸಿರುವುದು. ST ಮೀಸಲಾತಿಯನ್ನು 7%ಕ್ಕೆ ಹೆಚ್ಚಿಸಿರುವುದು. ಒಟ್ಟು 56% ಮೀಸಲಾತಿ ವ್ಯವಸ್ಥೆಗೆ ಸಂವಿಧಾನಾತ್ಮಕ ರಕ್ಷಣೆ ನೀಡುವುದು. ಈ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಕ್ರಮ ಕೈಗೊಳ್ಳುವುದು. ಆದರೆ ಕೇಂದ್ರ ಸರ್ಕಾರದ ನಿಲುವು: 2026ರ ಜುಲೈ 25ರಂದು ಕೇಂದ್ರ ಕಾನೂನು ಸಚಿವಾಲಯವು ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ, ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದ ಕಾರಣ ಸದ್ಯಕ್ಕೆ ಈ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸುವ ಪ್ರಸ್ತಾವನೆಯನ್ನು ಮುಂದುವರಿಸುವುದು ಸೂಕ್ತವಲ್ಲ ಎಂದು ತಿಳಿಸಿತ್ತು.

ಪ್ರಸ್ತುತ ಮುಂದಿನ ಕಾನೂನು ಮತ್ತು ಸಾಂವಿಧಾನಿಕ ಕ್ರಮಗಳು: ನವೆಂಬರ್ 13, 2026ರ ವರದಿಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು 9ನೇ ಅನುಸೂಚಿಗೆ ಸೇರಿಸುವ ಬೇಡಿಕೆಯನ್ನು ಪುನರುಚ್ಚರಿಸುವುದಾಗಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿಯೂ ಹೇಳಿದ್ದಾರೆ.

ಕೇಂದ್ರ ಸರ್ಕಾರವು 9ನೇ ಅನುಸೂಚಿಗೆ ಸೇರಿಸುವ ಪ್ರಸ್ತಾವನೆಯನ್ನು ಪರಿಗಣಿಸುವುದು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವುದು. ಕರ್ನಾಟಕದ 17% ಪರಿಶಿಷ್ಟ ಜಾತಿ ಮತ್ತು 7% ಪರಿಶಿಷ್ಟ ಪಂಗಡ ಮೀಸಲಾತಿಯ ಭವಿಷ್ಯವು ಈಗ ಎರಡು ಪ್ರಮುಖ ಮಾರ್ಗಗಳನ್ನು ಅವಲಂಬಿಸಿದೆ - ಸುಪ್ರೀಂ ಕೋರ್ಟ್‌ನ ಕಾನೂನು ತೀರ್ಪು ಮತ್ತು ಕೇಂದ್ರ ಸರ್ಕಾರದ ಸಂವಿಧಾನ ತಿದ್ದುಪಡಿ ಕ್ರಮ.

ಈ ಮೇಲ್ಕಂಡ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಶ್ರೀಮಠದಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಶ್ರೀಮಠದ ಧರ್ಮದರ್ಶಿಗಳು, ಜಿಲ್ಲಾಧ್ಯಕ್ಷರುಗಳು, ತಾಲೂಕು ಅಧ್ಯಕ್ಷರುಗಳು, ಶ್ರೀಮಠದ ಪ್ರತಿನಿಧಿಗಳು, ನಿವೃತ್ತ ನೌಕರರು, ಸಮಸ್ತ ಸಮಾಜದ ಬಂಧುಗಳ ಸಮಕ್ಷಮದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
📲Get App