🔥 TRENDING अररिया दिया होटल में बब्बन झा की सुपुत... किशनगंज में बंद घरों से चोरी का गिरोह... जोकीहाट पुलिस ने भगवानपुर से एनबीडब्ल्... Chief Minister Meets Anal Tribe's CSOs... गांव से चोरी की गई खुली गाड़ियां हरापू... ब्याज‑मुक्ति अभियान: कर्ज़ा वसूली एजें...
23 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಖಂಡಿಸಿ ಡಿವೈಎಫ್‌ಐ ಪ್ರತಿಭಟನೆಗ್ರಾಮದಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ; 300–400 ಕೂಲಿ ಕಾರ್ಮಿಕರ ಬಾಕಿ ಹಣ ಪಾವತಿಸಲು ಒತ್ತಾಯ

✍️ Reporter: Khaja Hussain 🗓 23 Nov 2026, 08:31 PM 👁 13
Share: 💬 WhatsApp 📘 Facebook 𝕏 Post
.

**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಖಂಡಿಸಿ ಡಿವೈಎಫ್‌ಐ ಪ್ರತಿಭಟನೆ

### ಗ್ರಾಮದಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ; 300–400 ಕೂಲಿ ಕಾರ್ಮಿಕರ ಬಾಕಿ ಹಣ ಪಾವತಿಸಲು ಒತ್ತಾಯ

**ಜಾಲಹಳ್ಳಿ, ನ. 23:** ಗ್ರಾಮದ ವಿವಿಧ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಜಾಲಹಳ್ಳಿ ವಲಯ ಸಮಿತಿಯ ವತಿಯಿಂದ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಗ್ರಾಮದ ಸಮಸ್ಯೆಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು. ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಲಿಖಿತ ಭರವಸೆ ನೀಡಿದ ಬಳಿಕ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು.

ಅಂಬೇಡ್ಕರ್ ವೃತ್ತದಿಂದ ರಂಗನಾಥ ದೇವಸ್ಥಾನದವರೆಗೆ ಇರುವ ಸಿಸಿ ರಸ್ತೆಯಲ್ಲಿ ಧೂಳು ಹೆಚ್ಚಾಗಿ ಏಳುತ್ತಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬೀದಿಗಳಲ್ಲಿ ಸಂಗ್ರಹವಾಗುವ ಕಸವನ್ನು ಎಲ್ಲೆಂದರಲ್ಲಿ ಸುಡುವುದರಿಂದ ವಾಯುಮಾಲಿನ್ಯ ಉಂಟಾಗಿ ಗ್ರಾಮದಲ್ಲಿ ಹೊಗೆ ಆವರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಹಳೆಯ ಒಟಿಬಿ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೂಲಿ ಹಣ ಪಾವತಿಯಾಗಿಲ್ಲ. ಮನರೇಗಾ ಯೋಜನೆಯಡಿ ಕೆಲಸ ಮಾಡಿದ ಸುಮಾರು 300ರಿಂದ 400 ಕಾರ್ಮಿಕರ ಬಾಕಿ ಹಣ ಪಾವತಿಸಬೇಕಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ದಾನವಾಗಿ ನೀಡಿರುವ ಸಂತೆ ಜಾಗವನ್ನು ಗುರುತಿಸಿ ಹದ್ದುಬಸ್ತು ಮಾಡದ ಕಾರಣ ಸೋಮವಾರದ ಸಂತೆಯಂದು ವ್ಯಾಪಾರಸ್ಥರು ಈಶ್ವರ ದೇವಸ್ಥಾನದಿಂದ ತೇರಿನವರೆಗೆ ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸಂತೆ ಮಾರುಕಟ್ಟೆಗೆ ಸೂಕ್ತ ಸ್ಥಳ ಹಾಗೂ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಇ-ಸ್ವತ್ತು ಹೆಸರಿನಲ್ಲಿ ಆಸ್ತಿ ನೋಂದಣಿ ಹಾಗೂ ಭೂ ಪರಿವರ್ತನೆಗೊಂಡ ಜಾಗಗಳಲ್ಲಿ ಸಾರ್ವಜನಿಕ ಆಸ್ತಿಗಳ ರಕ್ಷಣೆಗೆ ಸಂಬಂಧಿಸಿದಂತೆ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಕ್ರಮ ಹಾಗೂ ಅವ್ಯವಹಾರಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಕುರಿತು ಸೂಕ್ತ ತನಿಖೆ ನಡೆಸಿ ಅಕ್ರಮಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ, 5ನೇ ವಾರ್ಡ್‌ನ ಗರಿಬಲಿ ದರ್ಗಾ ಬಳಿ ಕುಡಿಯುವ ನೀರು ಮತ್ತು ಚರಂಡಿ ಸಮಸ್ಯೆ ಪರಿಹರಿಸಬೇಕು. 8ನೇ ವಾರ್ಡ್‌ನಲ್ಲಿ ಮಹಿಳೆಯರು ಹಾಗೂ ವೃದ್ಧರಿಗೆ ಅನುಕೂಲವಾಗುವಂತೆ ಹೈಟೆಕ್ ಶೌಚಾಲಯ ನಿರ್ಮಿಸಬೇಕು. 9ನೇ ವಾರ್ಡ್‌ನ ಅಂಗನವಾಡಿ ಕೇಂದ್ರದ ಮುಂಭಾಗ ಚರಂಡಿ ನೀರು ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಿಸಬೇಕು. ಉಪ್ಪಾರ ತಮ್ಮಣ್ಣ ಬಾವಿ ಬಳಿ ಚರಂಡಿ ದುರಸ್ತಿ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದರು.

ಸರ್ಕಾರಿ ಅನುದಾನದಲ್ಲಿ ನಿರ್ಮಿಸಿರುವ ಸಾರ್ವಜನಿಕ ಹಾಗೂ ವೈಯಕ್ತಿಕ ಶೌಚಾಲಯಗಳನ್ನು ತೆರವುಗೊಳಿಸಬಾರದು. ಗ್ರಾಮದ ಮೂಲಭೂತ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಡಿವೈಎಫ್‌ಐ ಮುಖಂಡರು ಆಗ್ರಹಿಸಿದರು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ರಾಜ್ಯ ಕಾರ್ಮಿಕ ಮುಖಂಡ ಶಬ್ಬೀರ್ ಜಾಲಹಳ್ಳಿ ಹಾಗೂ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ರಾಜ್ಯ ಕಾರ್ಮಿಕ ಮುಖಂಡ ಶಬ್ಬೀರ್ ಜಾಲಹಳ್ಳಿ, ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ರಾಜು ನಾಯಕ, ಜಿಲ್ಲಾ ಕಾರ್ಯದರ್ಶಿ ರಿಯಾಜ್ ಆರ್ತಿ, ಜಾಲಹಳ್ಳಿ ಡಿವೈಎಫ್‌ಐ ಅಧ್ಯಕ್ಷ ಕೊಂಡಯ್ಯ ಗೋಸಲ, ಕಾರ್ಯದರ್ಶಿ ವೆಂಕಟೇಶ್ ತ್ಯಾಪ್ಲಿ, ಮೌನೇಶ್ ಜಾಲಹಳ್ಳಿ, ಕೆಪಿಆರ್‌ಎಸ್‌ನ ಬಸವರಾಜ ವಂದಲಿ, ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಸಂತೋಷ್ ತ್ಯಾಪ್ಲಿ, ಬಸವರಾಜ ಲಿಂಗದಹಳ್ಳಿ, ಹನುಮಂತ ಮಡಿವಾಳ, ಗೋಪಾಲ್ ನಾಯಕ, ಶಿವು ನಡಿಗೇರ್, ಮಲ್ಲು ಗೌಡರ್, ಮಹೇಬೂಬ್ ಖುರೇಶಿ, ತಿಮ್ಮಣ್ಣ ಬೆಂಗಂಡಿ, ಅಮೀರ್ ಪಟೇಲ್, ನಿಂಗಯ್ಯ ಸುಣ್ಣದಕಲ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್ ಚಪ್ಪಳಕಿ, ನಬಿ ಟೈಲರ್ ಸೇರಿದಂತೆ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಮತ್ತು ಡಿವೈಎಫ್‌ಐ ಕಾರ್ಯಕರ್ತರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App