🔥 TRENDING રાજકોટમાં ખાનગી થિયેટરે દારૂ સાથે બર્થ... 3 सूत्री मांगों को लेकर पटवारी हड़ताल... गोरखपुर में बुलडोजर टक्कर से मरे 14 वर... चंद्रपूरमध्ये पोलीस अधीक्षक आयुष नोपान... Jammu & Kashmir Forecasts Lower Peak P... J&K High Court Transfers 84 Judicial O...
19 Nov 2026•
ગુજરાતી मराठी ਪੰਜਾਬੀ বাংলা

ಶಾಶ್ವತ ಬಸ್ ವ್ಯವಸ್ಥೆಗೆ ಆಗ್ರಹಿಸಿ SFI ಡಿಪೋ ಮುತ್ತಿಗೆ ### ವಿದ್ಯಾಗಿರಿ ಹಾಸ್ಟೆಲ್‌ಗಳು ಸೇರಿ ವಿವಿಧ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯ; ಡಿಪೋ ವ್ಯವಸ್ಥಾಪಕರ ಲಿಖಿತ ಭರವಸೆ ಬಳಿಕ ಪ್ರತಿಭಟನೆ ವಾಪಸ್ *

✍️ Reporter: Khaja Hussain 🗓 19 Nov 2026, 05:27 PM 👁 35
Share: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ಶಾಶ್ವತ ಬಸ್ ವ್ಯವಸ್ಥೆಗೆ ಆಗ್ರಹಿಸಿ SFI ಡಿಪೋ ಮುತ್ತಿಗೆ

### ವಿದ್ಯಾಗಿರಿ ಹಾಸ್ಟೆಲ್‌ಗಳು ಸೇರಿ ವಿವಿಧ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯ; ಡಿಪೋ ವ್ಯವಸ್ಥಾಪಕರ ಲಿಖಿತ ಭರವಸೆ ಬಳಿಕ ಪ್ರತಿಭಟನೆ ವಾಪಸ್

**ದೇವದುರ್ಗ:** ತಾಲೂಕಿನ ವಿದ್ಯಾರ್ಥಿಗಳಿಗೆ ಶಾಶ್ವತ ಹಾಗೂ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ದೇವದುರ್ಗ ತಾಲೂಕು ಸಮಿತಿಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನ.19ರಂದು ದೇವದುರ್ಗ ಸಾರಿಗೆ ಡಿಪೋಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕಿನ ವಿದ್ಯಾಗಿರಿ ಪ್ರದೇಶದಲ್ಲಿರುವ ಸರ್ಕಾರಿ ಹಾಸ್ಟೆಲ್‌ಗಳು, ವಸತಿ ಶಾಲೆಗಳು ಹಾಗೂ ಮುಂಡರಗಿ, ಪರಪುರ, ಗಾಜಲದಿನ್ನಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಲೂಕಿನ ಬಹುತೇಕ ವಿದ್ಯಾರ್ಥಿಗಳು ಬಡ ರೈತರು, ಕೂಲಿ ಕಾರ್ಮಿಕರು, ದಲಿತ ಹಾಗೂ ಹಿಂದುಳಿದ ವರ್ಗಗಳ ಕುಟುಂಬಗಳಿಂದ ಬಂದವರಾಗಿದ್ದು, ಶಿಕ್ಷಣಕ್ಕಾಗಿ ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು SFI ಆರೋಪಿಸಿದೆ.

ಪಟ್ಟಣದ ಹೊರವಲಯದಲ್ಲಿರುವ ವಿದ್ಯಾಗಿರಿ ಪ್ರದೇಶದಲ್ಲಿ ಸರ್ಕಾರಿ ಹಾಸ್ಟೆಲ್‌ಗಳು, ವಸತಿ ಶಾಲೆಗಳು ಹಾಗೂ ಕಾಲೇಜುಗಳಿದ್ದು, ನೂರಾರು ವಿದ್ಯಾರ್ಥಿಗಳು ಪ್ರತಿದಿನ ಸುಮಾರು 3ರಿಂದ 5 ಕಿ.ಮೀ. ನಡೆದುಕೊಂಡು ಪಟ್ಟಣಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಮಳೆ, ಬಿಸಿಲು, ಚಳಿ ಎನ್ನದೆ ನಡೆದುಕೊಂಡು ಬರಬೇಕಾಗಿದ್ದು, ಸಂಜೆ ವೇಳೆಯೂ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರು ಸುರಕ್ಷತೆಯ ಆತಂಕ ಎದುರಿಸುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಪರಪುರ, ಮುಂಡರಗಿ ಹಾಗೂ ಗಾಜಲದಿನ್ನಿ ಗ್ರಾಮಗಳಲ್ಲಿ ಬೆಳಗಿನ ಸಮಯ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತಡವಾಗಿ ತಲುಪುತ್ತಿದ್ದಾರೆ. ಸಂಜೆ ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದ್ದು, ಅನಿವಾರ್ಯವಾಗಿ ಆಟೋ ಹಾಗೂ ಖಾಸಗಿ ವಾಹನಗಳನ್ನು ಅವಲಂಬಿಸಿ ದಿನಕ್ಕೆ ₹80ರಿಂದ ₹100ವರೆಗೆ ಖರ್ಚು ಮಾಡುತ್ತಿದ್ದಾರೆ. ಇದು ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು SFI ಮುಖಂಡರು ಹೇಳಿದರು.

ಈ ಹಿಂದೆ ಹೋರಾಟ ನಡೆಸಿದ ಬಳಿಕ ಕೆಲ ದಿನಗಳ ಕಾಲ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ನಂತರ ಯಾವುದೇ ಸ್ಪಷ್ಟ ಕಾರಣ ನೀಡದೆ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

### SFI ಪ್ರಮುಖ ಬೇಡಿಕೆಗಳು

- ವಿದ್ಯಾಗಿರಿ ಪ್ರದೇಶದ ಹಾಸ್ಟೆಲ್‌ಗಳಿಗೆ ಬೆಳಿಗ್ಗೆ ಮತ್ತು ಸಂಜೆ ಶಾಶ್ವತ ಬಸ್ ವ್ಯವಸ್ಥೆ ಕಲ್ಪಿಸಬೇಕು.
- ದೇವದುರ್ಗದಿಂದ ಮಧ್ಯಾಹ್ನ 12:30 ಹಾಗೂ 1:45ಕ್ಕೆ ಮುಂಡರಗಿ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕು.
- ಪರಪುರ ಗ್ರಾಮಕ್ಕೆ ಬೆಳಿಗ್ಗೆ 6:30 ಹಾಗೂ ಸಂಜೆ 4:30ರ ಸುಮಾರಿಗೆ ಬಸ್ ವ್ಯವಸ್ಥೆ ಮಾಡಬೇಕು.
- ಗಾಜಲದಿನ್ನಿ ಗ್ರಾಮಕ್ಕೆ ಬೆಳಿಗ್ಗೆ 7 ಗಂಟೆಗೆ ಹಾಗೂ ದೇವದುರ್ಗದಿಂದ ಸಂಜೆ 4:30ಕ್ಕೆ ಬಸ್ ಬಿಡಬೇಕು.
- ಗಲಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಡಕಲಗುಡ್ಡ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು.
- ತಾಲೂಕಿನ ಪ್ರತಿಯೊಂದು ಹಳ್ಳಿಗೂ ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕು.
- ತಿಂಥಣಿ ಬ್ರಿಡ್ಜ್‌ನಿಂದ ದೇವದುರ್ಗ ಮಾರ್ಗವಾಗಿ ಸಂಜೆ 4:30, 5:30 ಹಾಗೂ 6:30ರ ಸುಮಾರಿಗೆ ಬಸ್ ಸಂಚಾರ ಕಲ್ಪಿಸಬೇಕು.
- ಲಿಂಗದಹಳ್ಳಿ, ಮೇದನಾಪುರ ಹಾಗೂ ಬಾಗೂರು ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು.

ವಿದ್ಯಾರ್ಥಿಗಳ ಬೇಡಿಕೆಗಳನ್ನು ತಕ್ಷಣ ಈಡೇರಿಸಿ ಲಿಖಿತ ಭರವಸೆ ನೀಡಬೇಕು. ಬಸ್ ಸೌಲಭ್ಯ ಇಲ್ಲದ ಕಾರಣ ಒಬ್ಬ ವಿದ್ಯಾರ್ಥಿಯಾದರೂ ಶಿಕ್ಷಣದಿಂದ ವಂಚಿತರಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು SFI ಎಚ್ಚರಿಕೆ ನೀಡಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ದೇವದುರ್ಗ ಸಾರಿಗೆ ಡಿಪೋ ವ್ಯವಸ್ಥಾಪಕ ಅದಪ್ಪ ಈಚನಾಳ್ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ಬೇಡಿಕೆಗಳ ಕುರಿತು ಲಿಖಿತ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹೋರಾಟವನ್ನು ಹಿಂಪಡೆದರು.

ಬಾಕ್ಸ್ ನಲ್ಲಿ

### ಜಾಲಹಳ್ಳಿ ಮಾರ್ಗದಲ್ಲಿ ಸಮಯ ಪಾಲನೆಗೆ ಡಿಪೋ ವ್ಯವಸ್ಥಾಪಕರ ಭರವಸೆ

ಜಾಲಹಳ್ಳಿ ಮಾರ್ಗದಲ್ಲಿ ಬಸ್‌ಗಳು ನಿಗದಿತ ಸಮಯಕ್ಕೆ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು N.E.K.R.T.C. ದೇವದುರ್ಗ ಘಟಕದ ಡಿಪೋ ವ್ಯವಸ್ಥಾಪಕರು ಲಿಖಿತ ಭರವಸೆ ನೀಡಿದ್ದಾರೆ.

ಬೆಳಗಿನ ವೇಳೆಯಲ್ಲಿ 6:30, 6:45, 7:30, 8:00 ಹಾಗೂ 8:30 ಗಂಟೆಗೆ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುವುದು. ಸಂಜೆ 4:30 ಗಂಟೆಗೆ ಹಾಗೂ ರಾತ್ರಿ ವೇಳೆಯಲ್ಲಿಯೂ ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಗ್ರಾಮಕ್ಕೂ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವುದು, ಹಗಲು ವೇಳೆಯ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಕ್ರಮಬದ್ಧಗೊಳಿಸುವುದು ಹಾಗೂ ಕೊನೆಯ ಟ್ರಿಪ್‌ಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಶಿಸ್ತು ಮತ್ತು ಕಾರ್ಯಾಚರಣೆ ಸುಧಾರಿಸುವುದರ ಜೊತೆಗೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಪೋ ವ್ಯವಸ್ಥಾಪಕರ ಸಹಿ ಹಾಗೂ ಮುದ್ರೆಯಿರುವ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

### ಪ್ರತಿಭಟನೆಯಲ್ಲಿ ಮುಖಂಡರು ಭಾಗಿ

ಪ್ರತಿಭಟನೆಯಲ್ಲಿ SFI ತಾಲೂಕು ಅಧ್ಯಕ್ಷೆ ಭಾಷಾ ಶ್ಯಾನೇರ್, ಕಾರ್ಯದರ್ಶಿ ಸಂತೋಷ ತ್ಯಾಪ್ಲಿ, ಉಪಾಧ್ಯಕ್ಷರಾದ ಬಾಬು ಶ್ಯಾನೇರ್, ಲಕ್ಷ್ಮಣ ಪರಪುರ, ಜಿಲ್ಲಾ ಅಧ್ಯಕ್ಷ ಮಹಾಲಿಂಗ್ ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿ ಪವನ್ ಕಮದಳ, ಸಿದ್ದೇಶ್ ಮುಂಡರಗಿ, ವಿದ್ಯಾರ್ಥಿಗಳಾದ ತೇಜಸ್ವಿನಿ, ಶಿಲ್ಪಾ, ಮೋನಿಕಾ, ಅನಿಲಕುಮಾರ್, ಪ್ರಜ್ವಲ್, ಶಿವರಾಜ್, ರಾಜ್ಯ ಕಾರ್ಮಿಕ ಮುಖಂಡ ಶಬ್ಬೀರ್ ಜಾಲಹಳ್ಳಿ, DYFI ಜಿಲ್ಲಾ ಅಧ್ಯಕ್ಷ ರಾಜು ನಾಯಕ, ತಾಲೂಕು ಅಧ್ಯಕ್ಷ ರಿಯಾಜ್, ಆರ್ತಿ, ಮಲ್ಲು, ವೆಂಕಟೇಶ್ ಸೇರಿದಂತೆ SFI ಹಾಗೂ DYFI ಪದಾಧಿಕಾರಿಗಳು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App