🔥 ट्रेंडिंग हरियाणा में भाई और सासू को संपत्ति विव... हरियाणा पुलिस ने मेटा कार्यालय के बाहर... ಬಿಸ್ಲೆರಿ ನೀರಿನ ಮಾದರಿಯಲ್ಲಿ ಕೋಲಿಫಾರ್ಮ್ ಬ... गेल ने 5 मेगावाट डेटा सेंटर के लिए भाग... डांतेवाड़ा के युवाओं ने एनएमडीसी से एल... ಮುಂಬೈ ಬಾಂದ್ರಾ ಟರ್ಮಿನಸ್‌ನಲ್ಲಿ 75 ದಿನಗಳ...
29 नव. 2026•
ગુજરાતી मराठी ਪੰਜਾਬੀ বাংলা

ರಾಯಚೂರು: ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

✍️ रिपोर्टर: Ningappa 🗓 29 नव. 2026, 12:05 PM 👁 19
शेयर करें: 💬 WhatsApp 📘 Facebook 𝕏 Post
ರಾಯಚೂರು: ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾನ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯಲ್ಲಿ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲೆಯ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅನುಷ್ಠಾನ, ಆಹಾರ ಧಾನ್ಯಗಳ ವಿತರಣೆ, ಇ-ಕೆವೈಸಿ ಪ್ರಕ್ರಿಯೆ ಹಾಗೂ ಪಡಿತರ ಅಕ್ಕಿಯ ಅಕ್ರಮ ಸಂಗ್ರಹಣೆ ಮತ್ತು ಸಾಗಾಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಜಿಲ್ಲೆಯಲ್ಲಿ ಈವರೆಗೆ ಶೇ.80ರಷ್ಟು ಪಡಿತರ ವಿತರಣೆ ಹಾಗೂ ಶೇ.83ರಷ್ಟು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರುವುದಾಗಿ ತಿಳಿಸಲಾಯಿತು. ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬೇರೆ ನಗರ ಹಾಗೂ ರಾಜ್ಯಗಳಿಗೆ ವಲಸೆ ಹೋಗಿರುವ ಫಲಾನುಭವಿಗಳ ಅನುಕೂಲಕ್ಕಾಗಿ ‘ಅನ್ನ ಸೇವೆ’ ಆ್ಯಪ್ ಮೂಲಕ ಮನೆಯಿಂದಲೇ ಇ-ಕೆವೈಸಿ ಪೂರ್ಣಗೊಳಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಪಡಿತರ ಅಕ್ಕಿಯ ಅಕ್ರಮ ಸಂಗ್ರಹಣೆ ಮತ್ತು ಕಾಳಸಂತೆ ಸಾಗಾಟದ ವಿರುದ್ಧ ಕೈಗೊಂಡ ಕಾರ್ಯಾಚರಣೆಯಲ್ಲಿ 5,000 ಮೆಟ್ರಿಕ್ ಟನ್ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು, 415 ಪ್ರಕರಣಗಳನ್ನು ದಾಖಲಿಸಿ 285 ಜನರನ್ನು ಬಂಧಿಸಲಾಗಿದೆ. ಪಡಿತರ ಅಕ್ಕಿಯ ಅಕ್ರಮ ಸಾಗಾಟ ಮತ್ತು ಮಾರಾಟವನ್ನು ತಡೆಗಟ್ಟಲು ಗಡಿಭಾಗಗಳಲ್ಲಿ ನಿರಂತರ ನಿಗಾ ವಹಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅಕ್ಕಿ ಬಳಕೆ ಕಡಿಮೆ ಇರುವ ಪ್ರದೇಶಗಳಲ್ಲಿ ಫಲಾನುಭವಿಗಳ ಪೌಷ್ಟಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಆಹಾರ ಧಾನ್ಯಗಳ ಕಿಟ್ ವಿತರಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸುವ ಕುರಿತು ಸಭೆಯಲ್ಲಿ ತಿಳಿಸಲಾಯಿತು. ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ವಾಣಿಜ್ಯ ಬಳಕೆ ಹಾಗೂ ಆಟೋಗಳಿಗೆ ಅಕ್ರಮವಾಗಿ ಗ್ಯಾಸ್ ಭರ್ತಿ ಮಾಡುವ ಪ್ರಕರಣಗಳನ್ನು ತಡೆಗಟ್ಟಲು ತಪಾಸಣೆ ಮತ್ತು ಕಾನೂನು ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸೂಚಿಸಲಾಯಿತು.

ಗ್ರಾಹಕರಿಗೆ ನಿಗದಿತ ತೂಕ ಮತ್ತು ಗುಣಮಟ್ಟದ ಸರಕುಗಳು ದೊರೆಯುವುದನ್ನು ಖಚಿತಪಡಿಸುವುದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದ್ದು, ಇಲಾಖೆಯ ಕಾರ್ಯನಿರ್ವಹಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಮರ್ಪಕ ಅನುಷ್ಠಾನ, ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಪಡಿತರ ವಿತರಣೆ, ಅಕ್ರಮ ಚಟುವಟಿಕೆಗಳ ನಿಯಂತ್ರಣ ಹಾಗೂ ಗ್ರಾಹಕರ ಹಿತರಕ್ಷಣೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವಂತೆ ಮಾನ್ಯ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್.ಎಸ್. ಭೋಸರಾಜು, ಮಾನವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ, ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಈಶ್ವರ ಕುಮಾರ್ ಕಾಂದೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
📲Get App