🔥 TRENDING ସିକ୍ଲୋନ୍‌ ଅକ୍ୱାନ୍‌ ପାଇଁ ଓଡିଶା ମୁଖ୍ୟମନ୍... Karnataka Holds 51% Share of India's G... Karnataka releases February 2027 First... Siddaramaiah Says He Was Seated in 5th... Suspense Lingers Over Rajasthan Cricke... Rajasthan's Dakshina Joshi Qualifies f...
20 Nov 2026•
ગુજરાતી मराठी ਪੰਜਾਬੀ বাংলা

ಚಲುವಾದಿ ದೊಡ್ಡಿ ಸರ್ಕಾರಿ ಶಾಲೆಯ ಸಮಸ್ಯೆ ಪರಿಹಾರಕ್ಕೆ ಎಸ್‌ಎಫ್‌ಐ ಮನವಿ

✍️ Reporter: Khaja Hussain 🗓 18 Nov 2026, 08:32 PM 👁 37
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಚಲುವಾದಿ ದೊಡ್ಡಿ ಸರ್ಕಾರಿ ಶಾಲೆಯ ಸಮಸ್ಯೆ ಪರಿಹಾರಕ್ಕೆ ಎಸ್‌ಎಫ್‌ಐ ಮನವಿ

### 15 ದಿನಗಳಿಂದ ಕುಡಿಯುವ ನೀರಿಲ್ಲ; ಶಾಲಾ ಆವರಣದಲ್ಲಿ ಗಿಡಗಂಟಿಗಳಿಂದ ವಿಷಕಾರಿ ಕ್ರಿಮಿಗಳ ಭೀತಿ

**ಗಲಗ:** ಗಲಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಲುವಾದಿ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಸಂತೋಷ ತ್ಯಾಪ್ಲಿ ಆಗ್ರಹಿಸಿದರು.

ಶಾಲೆಯ ಬೋರ್‌ವೆಲ್ ಕಳೆದ ಸುಮಾರು 15 ದಿನಗಳಿಂದ ಕೆಟ್ಟುಹೋಗಿದ್ದು, ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಅಲ್ಲದೆ, ಶಾಲೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿರುವುದರಿಂದ ಹಾವುಗಳು ಹಾಗೂ ವಿಷಕಾರಿ ಕ್ರಿಮಿಕೀಟಗಳು ಶಾಲಾ ಆವರಣಕ್ಕೆ ಪ್ರವೇಶಿಸುವ ಭೀತಿ ಎದುರಾಗಿದೆ. ಇದರಿಂದ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯವೂ ಇಲ್ಲದಿರುವುದು ವಿಷಾದನೀಯ ಎಂದರು.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲೆಯ ಬೋರ್‌ವೆಲ್ ದುರಸ್ತಿಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಆವರಣದಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಎಸ್‌ಎಫ್‌ಐ ಸಂಘಟನೆ ವತಿಯಿಂದ ಗಲಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಅರಕೇರಿ ತಾಲೂಕು ಅಧ್ಯಕ್ಷ ಬಾಬು ಶ್ಯಾನೇರದೊಡ್ಡಿ, ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ನಿಂಗಯ್ಯ ಸುಣ್ಣದಕಲ್, ವೆಂಕಟೇಶ್ ದೊರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App