🔥 TRENDING गोरखपुर जन चौपाल में सीएम योगी का बड़ा... Jharkhand Police Portal Crash Forces R... 92-Year-Old Woman Escapes Nursing Home... TPCC chief accuses BRS of betraying Te... Morning haze lingers in Hyderabad as r... New predatory aquatic insect species i...
20 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲರಿಗೆ ಡಿಡಿಪಿಯು ನೋಟಿಸ್ಡಿವೈಎಫ್‌ಐ ದೂರಿನ ಆಧಾರದಲ್ಲಿ ಸ್ಪಷ್ಟೀಕರಣಕ್ಕೆ ಸೂಚನೆ; ಈಗಾಗಲೇ ಉತ್ತರ ಸಲ್ಲಿಸಿದ್ದೇನೆ, ಯಾವುದೇ ತಪ್ಪು ಮಾಡಿಲ್ಲ ಎಂದ ಪ್ರಾಂಶುಪಾಲ ಸುರೇಶ್ ವಿಭೂತಿ

✍️ Reporter: Khaja Hussain 🗓 13 Nov 2026, 05:47 PM 👁 71
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲರಿಗೆ ಡಿಡಿಪಿಯು ನೋಟಿಸ್

### ಡಿವೈಎಫ್‌ಐ ದೂರಿನ ಆಧಾರದಲ್ಲಿ ಸ್ಪಷ್ಟೀಕರಣಕ್ಕೆ ಸೂಚನೆ; ಈಗಾಗಲೇ ಉತ್ತರ ಸಲ್ಲಿಸಿದ್ದೇನೆ, ಯಾವುದೇ ತಪ್ಪು ಮಾಡಿಲ್ಲ ಎಂದ ಪ್ರಾಂಶುಪಾಲ ಸುರೇಶ್ ವಿಭೂತಿ

**ಜಾಲಹಳ್ಳಿ, ನ.13:** ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುರೇಶ್ ವಿಭೂತಿ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಡಿಡಿಪಿಯು) ಕಚೇರಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಯಚೂರು ಜಿಲ್ಲಾ ಸಮಿತಿಯು ಅಕ್ಟೋಬರ್ 8ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಅಕ್ಟೋಬರ್ 16ರಂದು ನೋಟಿಸ್ ನೀಡಲಾಗಿದ್ದು, ಆರೋಪಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ 19ರೊಳಗಾಗಿ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಸರ್ಕಾರಿ ನೌಕರರಾಗಿದ್ದರೂ ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷದ ಮುಖಂಡರ ಭಾವಚಿತ್ರಗಳು ಹಾಗೂ ಪಕ್ಷದ ಚಿಹ್ನೆ ಇರುವ ಪೋಸ್ಟರ್‌ಗಳನ್ನು ಪ್ರಕಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯವರ ವಿರುದ್ಧ ಟೀಕಾತ್ಮಕ ಹಾಗೂ ಅವಹೇಳನಕಾರಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಧಾರ್ಮಿಕ ಮತ್ತು ರಾಜಕೀಯ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟರ್‌ಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ಆರೋಪಗಳನ್ನು ಸಂಘಟನೆ ದೂರಿನಲ್ಲಿ ಉಲ್ಲೇಖಿಸಿದೆ.

ಇದಲ್ಲದೆ, ಕಾಲೇಜಿನಲ್ಲಿ ನಿಯಮಿತವಾಗಿ ಹಾಜರಿರದೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಲಾಗಿದೆ. ಈ ನಡವಳಿಕೆಗಳು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು–1966ರ ಉಲ್ಲಂಘನೆಯಾಗುತ್ತವೆ ಎಂದು ಡಿವೈಎಫ್‌ಐ ಆಕ್ಷೇಪಿಸಿದೆ.

ಬಾಕ್ಸ್ ನಲ್ಲಿ

**ಆರೋಪಗಳನ್ನು ತಳ್ಳಿಹಾಕಿದ ಪ್ರಾಂಶುಪಾಲರು:**

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಭಾರ ಪ್ರಾಂಶುಪಾಲರಾದ ಸುರೇಶ್ ವಿಭೂತಿ ಅವರು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಲೇಜಿನ ಅಭಿವೃದ್ಧಿ ಕಾರ್ಯಗಳು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ನಿರ್ವಹಿಸಿದ್ದೇನೆ. ಕಾಲೇಜು ಸಮಯದಲ್ಲಿ ಕಾಲೇಜಿನ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಈಗಾಗಲೇ ಮಾನ್ಯ ಡಿಡಿಪಿಯು ಅವರು ನೀಡಿದ ನೋಟಿಸ್‌ಗೆ ಉತ್ತರ ಸಲ್ಲಿಸಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

**ಡಿವೈಎಫ್‌ಐ ಅಸಮಾಧಾನ:**

ದೂರಿನ ಹಿನ್ನೆಲೆಯಲ್ಲಿ ಇಲಾಖೆಯು ನೋಟಿಸ್ ಜಾರಿಗೊಳಿಸಿ ಸ್ಪಷ್ಟೀಕರಣ ಕೇಳಿರುವುದನ್ನು ಸಂಘಟನೆ ಗಮನಿಸಿದೆ. ಆದರೆ, ನೋಟಿಸ್ ನೀಡಿದ ನಂತರ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಇಲಾಖೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಡಿವೈಎಫ್‌ಐ ಅಸಮಾಧಾನ ವ್ಯಕ್ತಪಡಿಸಿದೆ. ನಿಗದಿತ ಗಡುವಿನೊಳಗೆ ಸಮಜಾಯಿಷಿ ಸಲ್ಲಿಸಲಾಗಿದೆಯೇ? ಸಲ್ಲಿಸಿದ್ದರೆ ಅದನ್ನು ಪರಿಶೀಲಿಸಲಾಗಿದೆಯೇ? ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲಾಗಿದೆಯೇ? ಎಂಬ ಪ್ರಶ್ನೆಗಳನ್ನು ಸಂಘಟನೆ ಮುಂದಿಟ್ಟಿದೆ.

ಸರ್ಕಾರಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯುತ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳಲ್ಲಿ ಕರ್ತವ್ಯ ಲೋಪ ಅಥವಾ ನಿಯಮ ಉಲ್ಲಂಘನೆಯ ಆರೋಪಗಳು ಕೇಳಿಬಂದಾಗ ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಕೇವಲ ನೋಟಿಸ್ ನೀಡುವುದಕ್ಕೆ ಇಲಾಖೆಯ ಕ್ರಮ ಸೀಮಿತವಾಗಬಾರದು ಎಂದು ಸಂಘಟನೆ ಒತ್ತಾಯಿಸಿದೆ.

ಬಾಕ್ಸ್ ನಲ್ಲಿ

**ಡಿವೈಎಫ್‌ಐ ಜಿಲ್ಲಾಧ್ಯಕ್ಷ ರಾಜು ನಾಯಕ ಆಗ್ರಹ:**

ನೋಟಿಸ್ ನೀಡಿದರೆ ಅಧಿಕಾರಿಗಳ ಕರ್ತವ್ಯ ಮುಗಿಯಿತೇ? ಲೋಪಗಳನ್ನು ಸರಿಪಡಿಸಬೇಕಾದ ಅಧಿಕಾರಿಗಳೇ ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ತೋರಿದರೆ ಸಾರ್ವಜನಿಕರು ನ್ಯಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು? ಆದ್ದರಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕೂಡಲೇ ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡಿವೈಎಫ್‌ಐ ಸಂಘಟನೆಯು ಮುಂದಿನ ಹಂತದ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಸಿದ್ದಾರೆ.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App