🔥 TRENDING Maharashtra CM Fadnavis Unveils A.R. R... CJP’s Dipke, Das, Ranka to Host Youth... India to Clean Heritage Sites Starting... Five-Century Palace Falls into Neglect... Samaleswari SC Set to Clash with Nagal... MCPCR Holds Consultative Meeting on Ch...
20 Nov 2026•
ગુજરાતી मराठी ਪੰਜਾਬੀ বাংলা

ಮುಂಡರಗಿ ಸೇರಿದಂತೆ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸದಿದ್ದರೆ ಚುನಾವಣೆ ಬಹಿಷ್ಕಾರ: ಗ್ರಾಮಸ್ಥರ ಎಚ್ಚರಿಕೆಅರಕೇರಾ ತಾಲೂಕು ರಚನೆ ಅವೈಜ್ಞಾನಿಕ ಎಂದು ಆರೋಪ; ಜಾಲಹಳ್ಳಿ ಹೋಬಳಿಯಲ್ಲೇ ಮುಂದುವರಿಸಲು ಜಿಲ್ಲಾಧಿಕಾರಿಗೆ ಮನವಿ

✍️ Reporter: Khaja Hussain 🗓 10 Nov 2026, 02:15 PM 👁 76
Watch on: 📘 Facebook
Share: 💬 WhatsApp 📘 Facebook 𝕏 Post
**ದೇವದುರ್ಗ–ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಮುಂಡರಗಿ ಸೇರಿದಂತೆ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸದಿದ್ದರೆ ಚುನಾವಣೆ ಬಹಿಷ್ಕಾರ: ಗ್ರಾಮಸ್ಥರ ಎಚ್ಚರಿಕೆ

### ಅರಕೇರಾ ತಾಲೂಕು ರಚನೆ ಅವೈಜ್ಞಾನಿಕ ಎಂದು ಆರೋಪ; ಜಾಲಹಳ್ಳಿ ಹೋಬಳಿಯಲ್ಲೇ ಮುಂದುವರಿಸಲು ಜಿಲ್ಲಾಧಿಕಾರಿಗೆ ಮನವಿ

**ರಾಯಚೂರು:** ಅರಕೇರಾ ತಾಲೂಕು ಕೇಂದ್ರಕ್ಕೆ ಸೇರ್ಪಡೆಗೊಳಿಸಿರುವ ಮುಂಡರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡರಗಿ, ಗಣಜಲಿ, ದೇವತ್ಕಲ್, ಕಾಟಮಳ್ಳಿ ಹಾಗೂ ಹುಲೇಗುಡ್ಡ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಿ, ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು 06-11-2026ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸರ್ಕಾರ ಈ ಗ್ರಾಮಗಳನ್ನು ದೇವದುರ್ಗ ತಾಲೂಕು ಹಾಗೂ ಜಾಲಹಳ್ಳಿ ಹೋಬಳಿಗೆ ಮರುಸೇರ್ಪಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಅರಕೇರಾ ತಾಲೂಕು ರಚನೆಗೆ ಅನುಮೋದನೆ ನೀಡಲಾಗಿದ್ದರೂ, ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಸಮರ್ಪಕವಾಗಿ ಪರಿಗಣಿಸದೆ ಅವೈಜ್ಞಾನಿಕವಾಗಿ ತಾಲೂಕು ರಚಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಅನಗತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.

ಅರಕೇರಾ ತಾಲೂಕು ಕೇಂದ್ರದಿಂದ ಮುಂಡರಗಿ ಗ್ರಾಮವು ಸುಮಾರು 35 ಕಿ.ಮೀ., ಗಣಜಲಿ 30 ಕಿ.ಮೀ., ದೇವತ್ಕಲ್ 20 ಕಿ.ಮೀ., ಕಾಟಮಳ್ಳಿ 25 ಕಿ.ಮೀ. ಹಾಗೂ ಹುಲೇಗುಡ್ಡ ಸುಮಾರು 30 ಕಿ.ಮೀ. ದೂರದಲ್ಲಿವೆ. ಈ ಗ್ರಾಮಗಳ ಜನರು ದೈನಂದಿನ ಕಂದಾಯ ಹಾಗೂ ಇತರ ಸರ್ಕಾರಿ ಕೆಲಸಗಳಿಗಾಗಿ ಅರಕೇರಾಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ಸಂಪರ್ಕದ ಕೊರತೆಯೂ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಈ ಗ್ರಾಮಗಳನ್ನು ದೇವದುರ್ಗ ತಾಲೂಕು ಹಾಗೂ ಜಾಲಹಳ್ಳಿ ಹೋಬಳಿಗೆ ಮರುಸೇರ್ಪಡೆಗೊಳಿಸಿದರೆ ಸಾರ್ವಜನಿಕರಿಗೆ ಶಿಕ್ಷಣ, ಆರೋಗ್ಯ, ಸಾರಿಗೆ, ವ್ಯಾಪಾರ ಹಾಗೂ ಸರ್ಕಾರಿ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ. ಜಾಲಹಳ್ಳಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ನಾಡಕಚೇರಿ, ಪೊಲೀಸ್ ಠಾಣೆ, ಕೃಷಿ ಕೇಂದ್ರ, ಅಂಚೆ ಕಚೇರಿ, ವಿದ್ಯುತ್ ಉಪಕೇಂದ್ರ ಹಾಗೂ ಬ್ಯಾಂಕ್‌ಗಳ ಸೌಲಭ್ಯಗಳಿವೆ. ಜೊತೆಗೆ ರಾಜ್ಯ ಹೆದ್ದಾರಿ ಸಂಖ್ಯೆ 61 ಜಾಲಹಳ್ಳಿ ಮೂಲಕ ಹಾದುಹೋಗುವುದರಿಂದ ಸಾರಿಗೆ ಸಂಪರ್ಕವೂ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಜಾಲಹಳ್ಳಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಪದವಿಪೂರ್ವ ಕಾಲೇಜುಗಳು ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಹೀಗಾಗಿ ಸಾರ್ವಜನಿಕರ ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ವ್ಯಾಪಾರ-ವಹಿವಾಟಿನ ಹಿತದೃಷ್ಟಿಯಿಂದ ಮೇಲ್ಕಂಡ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಿ ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮದ ಸಂಬಂಧಿತ ಕಾನೂನು ಮತ್ತು ನಿಯಮಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಗ್ರಾಮಗಳಿಗೆ ಕಳುಹಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ನಂತರ ವೈಜ್ಞಾನಿಕ ಹಾಗೂ ಭೌಗೋಳಿಕ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಗ್ರಾಮಗಳ ಬೇಡಿಕೆಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲಯ್ಯ ಕಟ್ಟಿಮನಿ, ಮುದ್ದಯ್ಯ, ಶಿವರಾಜ್, ಸಿದ್ದನಗೌಡ ಮೂಡಲಗುಂಡ, ಹನಮಗೌಡ ಮದರ್‌ಕಲ್, ರಂಗಣ್ಣ ಕೊಲ್ಕರ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App