🔥 TRENDING कायाकल्प अभियान के तहत स्कूलों की व्यव... Azam Khan: Today's Congress Leadership... Uttar Pradesh plants over 40 crore tre... Azam Khan mocks Asaduddin Owaisi with... Mizoram’s environmental watchdog urges... Mizoram and Assam Agree to Maintain St...
19 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ದೀಪಾವಳಿ ಹಬ್ಬದ ಭರ್ಜರಿ ಸಂಭ್ರಮ - ಬೆಲೆ ಏರಿಕೆ, ಬರಗಾಲದ ಮಧ್ಯೆಯೂ ಮಾರುಕಟ್ಟೆಯಲ್ಲಿ ಜನಜಂಗುಳಿ - ಹೂ, ಹಣ್ಣು, ಬಾಳೆ ದಿಂಡು, ದೀಪದ ಅಲಂಕಾರ ವಸ್ತುಗಳ ಮಾರಾಟ ಜೋರು - ವಾಹನ, ಬಟ್ಟೆ, ಚಿನ್ನ, ಪಟಾಕಿ ಖರೀದಿಯಲ್ಲೂ ಭರ್ಜರಿ ವ್ಯಾಪಾರ

✍️ Reporter: Ningappa 🗓 09 Nov 2026, 01:13 PM 👁 64
Share: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ - ಬೆಲೆ ಏರಿಕೆ, ಬರಗಾಲದ ಮಧ್ಯೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು - ಹೂ, ಹಣ್ಣು, ಬಾಳೆ ದಿಂಡು, ಗಣತೆ, ದೀಪದ ಅಲಂಕಾರ ವಸ್ತುಗಳ ಮಾರಾಟ ಜೋರು - ಬೆಳಿಗ್ಗೆಯಿಂದಲೇ ಕುಟುಂಬ ಸಮೇತ ಖರೀದಿಯಲ್ಲಿ ಜನರು ಬ್ಯುಸಿ - ವಾಹನ, ಬಟ್ಟೆ, ಚಿನ್ನ, ಪಟಾಕಿ, ಸಿಹಿ ತಿಂಡಿ ಅಂಗಡಿಗಳಲ್ಲೂ ಜನಸಂದಣಿ - ಮನೆ ಮನೆಗಳಲ್ಲಿ ದೀಪದ ಬೆಳಕು, ರಂಗೋಲಿ, ತೋರಣಗಳಿಂದ ಸಂಭ್ರಮ

ದೇವದುರ್ಗದಲ್ಲಿ ದೀಪಾವಳಿ ಹಬ್ಬದ ಭರ್ಜರಿ ಸಂಭ್ರಮ

ದೇವದುರ್ಗ: ತಾಲೂಕಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲ ದಿನಗಳಿಂದಲೇ ಹಬ್ಬದ ತಯಾರಿ ಆರಂಭವಾಗಿದ್ದು, ದೀಪಾವಳಿ ದಿನದಂದು ಪಟ್ಟಣದ ಮಾರುಕಟ್ಟೆಯಲ್ಲಿ ಜನಸಾಗರವೇ ಹರಿದು ಬಂದಿತ್ತು.

ಹೂ, ಹಣ್ಣು, ಬಾಳೆ ದಿಂಡು, ಗಣತೆ, ಕಬ್ಬು, ತೆಂಗಿನಕಾಯಿ, ಅರಿಶಿನ-ಕುಂಕುಮ, ತೋರಣ, ದೀಪದ ಅಲಂಕಾರ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಒಂದು ಕಡೆ ಬೆಲೆ ಏರಿಕೆ, ಮತ್ತೊಂದು ಕಡೆ ಬರಗಾಲದ ಆತಂಕದ ಮಧ್ಯೆಯೂ ಎಂದಿನಂತೆ ವ್ಯಾಪಾರ ವಹಿವಾಟು ಸಂಭ್ರಮ ಮನೆ ಮಾಡಿದೆ. ಹಬ್ಬ ಬಂತೆಂದರೆ ಸಾಕು, ಕಷ್ಟ, ನಷ್ಟ ಮರೆತು ಸಂಭ್ರಮಿಸುವುದು ನಮ್ಮ ಜನರ ಸಂಪ್ರದಾಯ ಎಂಬಂತೆ ಜನರು ಖರೀದಿಯಲ್ಲಿ ತೊಡಗಿದ್ದರು.

ಪಟ್ಟಣದ ಮಾರುಕಟ್ಟೆ ರಸ್ತೆಗಳು, ಮುಖ್ಯ ವೃತ್ತಗಳು, ಬಸ್ ನಿಲ್ದಾಣ ರಸ್ತೆ, ಗಾಂಧಿ ಚೌಕ್, ಶಾಂತಿನಗರ ರಸ್ತೆ ಸೇರಿದಂತೆ ಎಲ್ಲೆಡೆ ಹೂ, ಹಣ್ಣು, ಬಾಳೆ ದಿಂಡು, ದೀಪದ ಅಲಂಕಾರ ವಸ್ತುಗಳಿಂದ ಗ್ರಾಹಕರನ್ನು ಕೈ ಬೀಸಿ ಕರೆಯುವಂತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ತಾತ್ಕಾಲಿಕ ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರಸ್ಥರು ಹೂವಿನ ಹಾರ, ಸೇವಂತಿಗೆ, ಮಲ್ಲಿಗೆ, ಕನಕಾಂಬರ, ಗುಲಾಬಿ ಹೂವುಗಳನ್ನು ಮಾರಾಟ ಮಾಡುತ್ತಿದ್ದರು. ಹಣ್ಣುಗಳ ಅಂಗಡಿಗಳಲ್ಲಿ ಸೇಬು, ದಾಳಿಂಬೆ, ಬಾಳೆಹಣ್ಣು, ಕಿತ್ತಳೆ, ದ್ರಾಕ್ಷಿ ಖರೀದಿಗೆ ಜನರು ಮುಗಿಬಿದ್ದಿದ್ದರು.

ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು, ಯುವಕರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಮಕ್ಕಳು ಪಟಾಕಿಗಾಗಿ ಹಠ ಹಿಡಿದರೆ, ಮಹಿಳೆಯರು ಮನೆ ಅಲಂಕಾರಕ್ಕಾಗಿ ದೀಪಗಳು, ತೋರಣಗಳು, ರಂಗೋಲಿ ಬಣ್ಣಗಳು, ಹೂವುಗಳನ್ನು ಖರೀದಿಸುತ್ತಿದ್ದರು. ಪುರುಷರು ಬಾಳೆ ದಿಂಡು, ಕಬ್ಬು, ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದರು.

ದೀಪಾವಳಿ ವಿಶೇಷ ದಿನವಾಗಿದ್ದರಿಂದ ಪಟ್ಟಣದಲ್ಲಿ ವಾಹನಗಳ ಖರೀದಿಯೂ ಭರ್ಜರಿಯಾಗಿ ನಡೆಯಿತು. ದ್ವಿಚಕ್ರ ವಾಹನ, ಕಾರು ಶೋರೂಂಗಳಲ್ಲಿ ಜನಜಂಗುಳಿ ಕಂಡು ಬಂತು. ಹಬ್ಬದ ಶುಭ ಮುಹೂರ್ತದಲ್ಲಿ ಹೊಸ ವಾಹನ ಕೊಂಡುಕೊಳ್ಳುವುದು ಶುಭ ಎಂದು ನಂಬುವ ಜನರು, ಬೆಳಿಗ್ಗೆಯಿಂದಲೇ ಶೋರೂಂಗಳಿಗೆ ಭೇಟಿ ನೀಡಿ ವಾಹನಗಳನ್ನು ಬುಕ್ ಮಾಡಿ, ಪೂಜೆ ಮಾಡಿಸಿಕೊಂಡು ಮನೆಗೆ ಕೊಂಡೊಯ್ಯುತ್ತಿದ್ದರು.

ಅದೇ ರೀತಿ ಬಟ್ಟೆ ಅಂಗಡಿಗಳು, ಚಿನ್ನಾಭರಣ ಮಳಿಗೆಗಳು, ಪಟಾಕಿ ಅಂಗಡಿಗಳು, ಸಿಹಿ ತಿಂಡಿ ಅಂಗಡಿಗಳಲ್ಲಿಯೂ ಜನಸಂದಣಿ ಹೆಚ್ಚಾಗಿತ್ತು. ಹೊಸ ಬಟ್ಟೆ ಖರೀದಿಗೆ ಯುವಕ-ಯುವತಿಯರು ಮುಗಿಬಿದ್ದರೆ, ಮಹಿಳೆಯರು ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನದ ಆಭರಣಗಳನ್ನು ನೋಡುತ್ತಿದ್ದರು. ಪಟಾಕಿ ಅಂಗಡಿಗಳ ಮುಂದೆ ಮಕ್ಕಳ ದಂಡೇ ನೆರೆದಿತ್ತು. ಸಿಹಿ ತಿಂಡಿ ಅಂಗಡಿಗಳಲ್ಲಿ ಜಿಲೇಬಿ, ಲಾಡು, ಮೈಸೂರು ಪಾಕ್, ಹೋಳಿಗೆಗೆ ಬೇಡಿಕೆ ಹೆಚ್ಚಾಗಿತ್ತು.

ಸಂಜೆಯಾಗುತ್ತಿದ್ದಂತೆ ಮನೆ ಮನೆಗಳಲ್ಲಿ ದೀಪದ ಬೆಳಕು, ರಂಗೋಲಿ, ತೋರಣಗಳಿಂದ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಮನೆಯಂಗಳದಲ್ಲಿ ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಜನರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ರೈತರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಎಲ್ಲರೂ ಒಟ್ಟಾಗಿ ಹಬ್ಬದ ಖುಷಿಯಲ್ಲಿ ತೊಡಗಿದ್ದು, ದೇವದುರ್ಗ ತಾಲೂಕಿನಾದ್ಯಂತ ದೀಪಾವಳಿಯ ಬೆಳಕು ಪಸರಿಸಿತ್ತು.
📲Get App