🔥 ट्रेंडिंग जयपुर में घर में मां और दो बच्चों की ल... दरभंगा में रेलवे रैक प्वाइंट के पास बा... દાહોદમાં ખનિજ માફિયાઓ સામે તંત્રની લાલ... पीपलरावां में कांग्रेस ने संविधान दिवस... न्यूज़ीलैंड बनाम भारत 2nd टेस्ट लाइव क... नाचना पंचायत समिति में प्रधान पद का चु...
27 नव. 2026•
ગુજરાતી मराठी ਪੰਜਾਬੀ বাংলা
देश

ಕಾರಂಜಾ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ವಿಳಂಬ ಧೋರಣೆ; ಭರವಸೆ ಈಡೇರದಿದ್ದರೆ 920 ದಿನಗಳ ಹೋರಾಟ ಮತ್ತೆ ಆರಂಭ – ಸಮಿತಿಯ ಎಚ್ಚರಿಕೆ

✍️ रिपोर्टर: Basavaraj pujari 🗓 27 नव. 2026, 10:04 AM 👁 21
शेयर करें: 💬 WhatsApp 📘 Facebook 𝕏 Post

“ಸಮಿತಿಯ ನಡೆ, ಜನಪ್ರತಿನಿಧಿಗಳ ಕಡೆ” ಅಭಿಯಾನದಡಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ಸಲ್ಲಿಕೆ ಬೀದರ, ನವೆಂಬರ್ 26: ಕಾರಂಜಾ ಮುಳುಗಡೆ ಸಂತ್ರಸ್ತ ರೈತರಿಗೆ ನ್ಯಾಯಯುತ ಹಾಗೂ ವೈಜ್ಞಾನಿಕ ಆಧಾರಿತ ಪರಿಹಾರ ನೀಡುವ ಕು

ಕಾರಂಜಾ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ವಿಳಂಬ ಧೋರಣೆ; ಭರವಸೆ ಈಡೇರದಿದ್ದರೆ 920 ದಿನಗಳ ಹೋರಾಟ ಮತ್ತೆ ಆರಂಭ – ಸಮಿತಿಯ ಎಚ್ಚರಿಕೆ

“ಸಮಿತಿಯ ನಡೆ, ಜನಪ್ರತಿನಿಧಿಗಳ ಕಡೆ” ಅಭಿಯಾನದಡಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ಸಲ್ಲಿಕೆ

ಬೀದರ, ನವೆಂಬರ್ 26: ಕಾರಂಜಾ ಮುಳುಗಡೆ ಸಂತ್ರಸ್ತ ರೈತರಿಗೆ ನ್ಯಾಯಯುತ ಹಾಗೂ ವೈಜ್ಞಾನಿಕ ಆಧಾರಿತ ಪರಿಹಾರ ನೀಡುವ ಕುರಿತು ಸರ್ಕಾರ ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯು ತನ್ನ ಹೋರಾಟವನ್ನು ಮತ್ತೊಮ್ಮೆ ಆರಂಭಿಸುವ ಅನಿವಾರ್ಯತೆ ಎದುರಾಗಿದೆ ಎಂದು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ.

ಸಮಿತಿಯು ಹಮ್ಮಿಕೊಂಡಿರುವ “ಸಮಿತಿಯ ನಡೆ, ಜನಪ್ರತಿನಿಧಿಗಳ ಕಡೆ” ಎಂಬ ಜನಪ್ರತಿನಿಧಿಗಳನ್ನು ನೇರವಾಗಿ ಭೇಟಿಯಾಗಿ ಸಂತ್ರಸ್ತ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಭಿಯಾನದ ಭಾಗವಾಗಿ ಇಂದು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರನ್ನು ಭೇಟಿಯಾಗಿ, ಕಾರಂಜಾ ಸಂತ್ರಸ್ತ ರೈತರ ದಶಕಗಳ ಸಮಸ್ಯೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಮನವರಿಕೆ ಮಾಡಿಕೊಟ್ಟು ವಿವರವಾದ ಮನವಿ ಪತ್ರ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮುಖಂಡರು, ಕಾರಂಜಾ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿ ಸಮಿತಿಯು ಸುದೀರ್ಘ ಹೋರಾಟ ನಡೆಸಿದೆ. ವಿಶೇಷವಾಗಿ, ಸುಮಾರು 920 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗಿತ್ತು. ಈ ಹೋರಾಟದ ಸಂದರ್ಭದಲ್ಲಿ ಸರ್ಕಾರದ ಪ್ರಮುಖರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರು ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಹಲವು ಹಂತಗಳಲ್ಲಿ ಭರವಸೆ ನೀಡಿದ್ದರು. ಸರ್ಕಾರದ ಭರವಸೆಯನ್ನು ನಂಬಿ, ರೈತರ ಹಿತದೃಷ್ಟಿಯಿಂದ ಹಾಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯಬಹುದೆಂಬ ವಿಶ್ವಾಸದಿಂದ ಸಮಿತಿಯು ತನ್ನ ನಿರಂತರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಆದರೆ, ಭರವಸೆ ನೀಡಿ ಹೋರಾಟವನ್ನು ಸ್ಥಗಿತಗೊಳಿಸಿದ ನಂತರವೂ ಪರಿಹಾರ ಬಿಡುಗಡೆ ಕುರಿತು ಯಾವುದೇ ನಿರ್ದಿಷ್ಟ ಪ್ರಗತಿ ಕಂಡುಬಂದಿಲ್ಲ. ಸರ್ಕಾರದ ಮಟ್ಟದಲ್ಲಿ ಸಂತ್ರಸ್ತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯದಿರುವುದು ರೈತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ರೈತರ ತಾಳ್ಮೆಯನ್ನು ಸರ್ಕಾರ ದೌರ್ಬಲ್ಯವೆಂದು ಭಾವಿಸಬಾರದು. ನೀಡಿದ ಭರವಸೆಯನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.

ಕೇವಲ ಪರಿಹಾರದ ಹಣದ ಪ್ರಶ್ನೆಯಷ್ಟೇ ಇದಲ್ಲ; ದಶಕಗಳಿಂದ ತಮ್ಮ ಭೂಮಿ, ಬದುಕು ಮತ್ತು ಜೀವನೋಪಾಯವನ್ನು ಕಳೆದುಕೊಂಡಿರುವ ಸಾವಿರಾರು ಸಂತ್ರಸ್ತ ಕುಟುಂಬಗಳ ನ್ಯಾಯಯುತ ಹಕ್ಕಿನ ಪ್ರಶ್ನೆಯಾಗಿದೆ. ಬೀದರ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಯಾದ ಕಾರಂಜಾ ಯೋಜನೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ದೊರೆತಿದ್ದರೂ, ಯೋಜನೆಗಾಗಿ ತ್ಯಾಗ ಮಾಡಿದ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸುವಲ್ಲಿ ಸರ್ಕಾರಗಳು ವಿಫಲವಾಗಿರುವುದು ದುರದೃಷ್ಟಕರ ಎಂದು ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ಮನವಿಯನ್ನು ಆಲಿಸಿದ ಸಚಿವ ಶ್ರೀ ಈಶ್ವರ ಬಿ. ಖಂಡ್ರೆ ಅವರು, ಕಾರಂಜಾ ಸಂತ್ರಸ್ತ ರೈತರ ಸಮಸ್ಯೆಯನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಈ ವಿಷಯದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಸಚಿವರ ಭರವಸೆಯನ್ನು ಸಮಿತಿಯು ಸ್ವಾಗತಿಸಿದರೂ, ಕೇವಲ ಮತ್ತೊಂದು ಭರವಸೆಯಿಂದ ರೈತರು ಹೋರಾಟದಿಂದ ಹಿಂದೆ ಸರಿಯುವ ಪರಿಸ್ಥಿತಿ ಈಗ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿತು. ಸರ್ಕಾರವು ಈ ಹಿಂದೆಯೂ ಹಲವು ಬಾರಿ ಭರವಸೆ ನೀಡಿದ್ದು, ಅವುಗಳು ಕಾರ್ಯರೂಪಕ್ಕೆ ಬಾರದಿರುವುದರಿಂದ ಈ ಬಾರಿ ಕಾಲಮಿತಿಯೊಳಗೆ ಸ್ಪಷ್ಟ ನಿರ್ಧಾರ ಮತ್ತು ಪರಿಹಾರದ ದಿಕ್ಕಿನಲ್ಲಿ ಪ್ರಾಯೋಗಿಕ ಕ್ರಮಗಳು ನಡೆಯಬೇಕು ಎಂದು ಒತ್ತಾಯಿಸಲಾಯಿತು.

ಸರ್ಕಾರವು ಸಂತ್ರಸ್ತ ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ನ್ಯಾಯಯುತ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳದಿದ್ದರೆ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯು ಮುಂದಿನ ದಿನಗಳಲ್ಲಿ ತನ್ನ ಹೋರಾಟವನ್ನು ಮರುಚಾಲನೆಗೊಳಿಸಲಿದೆ. ಈ ಹೋರಾಟ ಹಿಂದಿನಂತೆ ನಿರಂತರವಾಗಿಯೂ, ಈ ಬಾರಿ ನಿರ್ಣಾಯಕ ಹಂತ ತಲುಪುವವರೆಗೂ ಮುಂದುವರಿಯಲಿದೆ. ರೈತರ ನ್ಯಾಯಯುತ ಹಕ್ಕುಗಳನ್ನು ಪಡೆಯುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಹೂಚಕನಳ್ಳಿ, ರಾಜಪ್ಪ ಕೋಸಂ, ಯೂಸುಫ್ ಮಿಯಾ ರೇಕುಳಗಿ, ವಿನಯ್ ಕುಮಾರ್ ಮಾಳಗೆ, ಮಾದಪ್ಪ ಖೌದೇ, ವೀರೇಂದ್ರ ಭಾತ್ಮುರ್ಗೆ, ಬಸವರಾಜ ಹಿಂದೆ, ಸಂಗಾರೆಡ್ಡಿ, ರಾಮ್ ಶೆಟ್ಟಿ, ಮಹೇಶ್ ಕಮಲಪುರ್, ರೇವಣಪ್ಪ ರಂಜೋಳ, ಶಂಕರ್ ರಾವ್ ಮನಳ್ಳಿ, ಲಕ್ಷ್ಮೀಬಾಯಿ ಮಾದಪ್ಪ, ವಿದ್ಯಾವತಿ ಔರಾದೆ, ಕನ್ಯಾಕುಮಾರಿ ಸಿಂದಬಂದಗಿ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
📲Get App